ನವದೆಹಲಿ: 2021ನೇ ಸಾಲಿನ ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ ರಾಷ್ಟ್ರಗಳನ್ನೊಳಗೊಂಡ ಬ್ರಿಕ್ಸ್ (BRICS) ಶೃಂಗಸಭೆ ನೇತೃತ್ವ ಭಾರತದ ಹೆಗಲಿಗೆ ಬಿದ್ದಿದ್ದು, ಇಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರ ಅಧ್ಯಕ್ಷತೆಯಲ್ಲಿ ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆ ನಡೆಯಲಿದೆ.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಈ ಸಭೆ ನಡೆಯಲಿದ್ದು, ಈ ಐದು ರಾಷ್ಟ್ರಗಳ ನಾಯಕರು ಕೋವಿಡ್ -19, ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ಎದುರಿಸುವ, ಬಹುಪಕ್ಷೀಯ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಸುಧಾರಿಸುವ ಅಗತ್ಯತೆ, ಸುಸ್ಥಿರ ಅಭಿವೃದ್ಧಿ ಸೇರಿದಂತೆ ಜಾಗತಿಕ ಮತ್ತು ಪ್ರಾದೇಶಿಕ ಕಾಳಜಿ ವಿಚಾರಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
"ಬ್ರಿಕ್ಸ್ ಅಧ್ಯಕ್ಷತೆ ವಹಿಸಲಿರುವ ಭಾರತವು 2021ರ ಜೂನ್ 1 ರಂದು ಬ್ರಿಕ್ಸ್ ವಿದೇಶಾಂಗ / ಅಂತರರಾಷ್ಟ್ರೀಯ ವ್ಯವಹಾರಗಳ ಸಚಿವರ ಸ್ವತಂತ್ರ ಸಭೆಯನ್ನು ಕರೆಯಲಿದೆ" ಎಂದು ವಿದೇಶಾಂಗ ಸಚಿವಾಲಯ ನಿನ್ನೆ ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು.
ಇದನ್ನೂ ಓದಿ: ಈ ಬಾರಿಯ ಬ್ರಿಕ್ಸ್ ಸಮಾವೇಶದ ಅಧ್ಯಕ್ಷತೆ ಭಾರತದ ಹೆಗಲಿಗೆ
ಸಭೆಯಲ್ಲಿ ಬ್ರೆಜಿಲ್ ವಿದೇಶಾಂಗ ಸಚಿವ ಕಾರ್ಲೋಸ್ ಆಲ್ಬರ್ಟೊ ಫ್ರಾಂಕೊ ಫ್ರಾಂಕಾ, ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್, ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಮತ್ತು ದಕ್ಷಿಣ ಆಫ್ರಿಕಾದ ವಿದೇಶಾಂಗ ಸಚಿವ ಗ್ರೇಸ್ ನಲೆಡಿ ಮಂದಿಸಾ ಪಾಂಡೋರ್ ಪಾಲ್ಗೊಳ್ಳುವ ನಿರೀಕ್ಷೆಯಿದೆ.
13ನೇ ಬ್ರಿಕ್ಸ್ ಶೃಂಗಸಭೆಯು ಈ ವರ್ಷದ ಅಂತ್ಯದಲ್ಲಿ ನಡೆಯಲಿದೆ. ಶೃಂಗಸಭೆಯ ನೇತೃತ್ವ ವಹಿಸಿಕೊಳ್ಳುವ ಹಿನ್ನೆಲೆಯಲ್ಲಿ ಭಾರತ ಫೆಬ್ರವರಿ 24 ರಂದು ಬ್ರಿಕ್ಸ್ ಹಣಕಾಸು ಮತ್ತು ಕೇಂದ್ರ ಬ್ಯಾಂಕ್ ನಿಯೋಗಗಳ ಮೊದಲ ಸಭೆಯನ್ನು ಆಯೋಜಿಸಿತ್ತು. ಇಂದು ವಿದೇಶಾಂಗ ಸಚಿವರ ಸಭೆ ನಡೆಸುತ್ತಿದೆ.
ಬ್ರಿಕ್ಸ್ ರಾಷ್ಟ್ರಗಳ ಕೋವಿಡ್ ಸ್ಥಿತಿಗತಿ - ನೆರವು
ಭಾರತವು ಕೊರೊನಾ ಎರಡನೇ ಅಲೆಯ ಭೀಕರ ಪರಿಸ್ಥಿತಿ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಬ್ರಿಕ್ಸ್ ಸಭೆ ನಡೆಯುತ್ತಿದೆ. ಬ್ರೆಜಿಲ್, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ ರಾಷ್ಟ್ರಗಳಲ್ಲಿಯೂ ಕೊರೊನಾ ಅಬ್ಬರಿಸಿ ಸ್ವಲ್ಪ ತಣ್ಣಗಾಗಿದೆ. ಕೊರೊನಾ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಬ್ರೆಜಿಲ್ ಎರಡನೇ ಸ್ಥಾನದಲ್ಲಿದ್ದರೆ, ಅತೀ ಹೆಚ್ಚು ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಚೀನಾದಲ್ಲೆ ಮೊದಲು ವೈರಸ್ ಪತ್ತೆಯಾಗಿತ್ತಾದರೂ ಕೊರೊನಾದಿಂದ ತ್ವರಿತವಾಗಿ ಹೊರಬಂದಿರುವುದಾಗಿ ಹೇಳಿಕೊಂಡು ಬಂದಿದೆ.
ರಾಷ್ಟ್ರ | ಕೋವಿಡ್ ಕೇಸ್ | ಮೃತರ ಸಂಖ್ಯೆ | ಗುಣಮುಖರು |
ಬ್ರೆಜಿಲ್ | 1,65,47,674 | 4,62,966 | 1,49,64,631 |
ರಷ್ಯಾ | 50,71,917 | 1,21,501 | 46,84,585 |
ಭಾರತ | 2,80,47,534 | 3,29,100 | 2,56,92,342 |
ಚೀನಾ | 91,122 | 4,636 | 86,149 |
ದಕ್ಷಿಣ ಆಫ್ರಿಕಾ | 16,65,617 | 56,506 | 15,59,337 |
ಭಾರತವು ಕೊರೊನಾ ಮೊದಲನೇ ಅಲೆಯಿಂದ ಚೇತರಿಸಿಕೊಂಡು ಎರಡು ಲಸಿಕೆಗಳನ್ನು ಉತ್ಪಾದಿಸಿ, ಅಭಿವೃದ್ಧಿಪಡಿಸಿ ಸಂಕಷ್ಟದಲ್ಲಿದ್ದ ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾ ದೇಶಗಳಿಗೆ ವ್ಯಾಕ್ಸಿನ್ ಕಳುಹಿಸಿಕೊಟ್ಟಿದೆ. ಆದರೆ 2ನೇ ಅಲೆಯು ಭಾರತದ ವೈದ್ಯಕೀಯ ಕ್ಷೇತ್ರವನ್ನೇ ಅಲುಗಾಡಿಸಿದ್ದು, ರಷ್ಯಾ ಆಪತ್ಬಾಂಧವನಾಗಿ ಬಂದು 20 ಆಕ್ಸಿಜನ್ ಉತ್ಪಾದಕಗಳು, 75 ವೆಂಟಿಲೇಟರ್ಗಳು ಮತ್ತು 2 ಲಕ್ಷ ಪ್ಯಾಕೆಟ್ ಔಷಧಿಗಳು ಸೇರಿದಂತೆ 22 ಟನ್ ವೈದ್ಯಕೀಯ ಸಾಮಗ್ರಿಗಳನ್ನು ಭಾರತಕ್ಕೆ ಪೂರೈಸಿದೆ.
ಇದನ್ನೂ ಓದಿ: ಭಾರತಕ್ಕೆ 22 ಟನ್ ವೈದ್ಯಕೀಯ ಸಾಮಗ್ರಿ ಕಳುಹಿಸಿದ ಆಪತ್ಪಾಂಧವ ರಷ್ಯಾ
ಪಾಕಿಸ್ತಾನ ಮತ್ತು ಚೀನಾ ಬಿಟ್ಟು ಯಾವ ದೇಶಗಳಿಂದಾದರೂ ನೆರವು ಪಡೆಯಲು ಭಾರತ ಸಿದ್ಧವಿದೆಯಾದರೂ, ಇತ್ತೀಚೆಗಷ್ಟೇ ಚೀನಾದ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರತಕ್ಕೆ ಸಾವಿರಾರು ಆಮ್ಲಜನಕ ಸಾಂದ್ರಕಗಳು ಮತ್ತು ಇತರ ವೈದ್ಯಕೀಯ ಸಾಧನಗಳನ್ನು ಸರಬರಾಜು ಮಾಡಲು ಸಿದ್ಧರಿರುವುದಾಗಿ ತಿಳಿಸಿದ್ದರು. ಭಾರತ-ಚೀನಾ ಸೈನಿಕರ ನಡುವೆ ಕಳೆದ ವರ್ಷ ನಡೆದ ಗಾಲ್ವಾನ್ ಸಂಘರ್ಷವು ಉಭಯ ರಾಷ್ಟ್ರಗಳ ಬಾಂಧವ್ಯವನ್ನು ಕಡಿಮೆ ಮಾಡಿದೆ.