ಜೈಪುರ(ರಾಜಸ್ಥಾನ): ಕಾಲಲ್ಲಿ ಧರಿಸಿದ್ದ ಚಿನ್ನದ ಕಾಲುಂಗುರವನ್ನು ಕದಿಯಲು ಬಂದ ಕಳ್ಳರು 108 ವರ್ಷದ ವೃದ್ಧೆಯ ಬೆರಳುಗಳನ್ನೇ ಕತ್ತರಿಸಿದ ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. ರಕ್ತಸಿಕ್ತ ಮಹಿಳೆಯನ್ನು ಆಸ್ಪತೆಗೆ ದಾಖಲಿಸಲಾಗಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಜೈಪುರದ ಕಾಲೊನಿಯೊಂದರ ನಿವಾಸಿಯಾಗಿದ್ದ 108 ವರ್ಷದ ವೃದ್ಧೆ ಮನೆಯಲ್ಲಿ ಒಂಟಿಯಾಗಿದ್ದ ದಾಳಿ ಮಾಡಿದ ಖದೀಮರು ಆಕೆಯನ್ನು ಸ್ನಾನಗೃಹಕ್ಕೆ ಎಳೆದೊಯ್ದು, ಕಾಲಲ್ಲಿದ್ದ ಚಿನ್ನದ ಕಾಲುಂಗರವನ್ನು ದರೋಡೆಗೆ ಯತ್ನಿಸಿದ್ದಾರೆ. ಈ ವೇಳೆ ಬಿಚ್ಚಲು ಬಾರದಿದ್ದಕ್ಕೆ, ಕಾಲಿನ ಬೆರಳುಗಳನ್ನೇ ಕತ್ತರಿಸಿ ಚಿನ್ನದುಂಗುರ ಕದ್ದೊಯ್ದಿದ್ದಾರೆ.
ವೃದ್ಧೆಯ ಮಗಳು ಈ ವೇಳೆ ದೇವಸ್ಥಾನಕ್ಕೆ ಹೋಗಿ ವಾಪಸಾದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು, ಕ್ರೂರಿ ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮನೆಯೊಳಗೆ ನುಗ್ಗುತ್ತಿರುವ ದೃಶ್ಯ ಪೊಲೀಸರಿಗೆ ಸಿಕ್ಕಿದೆ. ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳರ ಪತ್ತೆಗೆ ಜಾಲ ಬೀಸಲಾಗಿದೆ.