ವೆಲ್ಲಿಂಗ್ಟನ್: ನ್ಯೂಜಿಲೆಂಡ್ ದೇಶದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿ ಪ್ರಕರಣ ಮತ್ತು ಕೊರೊನಾ ವೈರಸ್ ಬಿಕ್ಕಟ್ಟುಗಳನ್ನು ಪ್ರಧಾನಿ ಜಸಿಂಡಾ ಅರ್ಡೆರ್ನ್ ಅತ್ಯಂತ ದಿಟ್ಟತನ ಹಾಗೂ ಅಷ್ಟೇ ಜಾಣ್ಮೆಯಿಂದ ನಿಭಾಯಿಸಿದ್ದರು. ಇದಕ್ಕಾಗಿ ಅವರನ್ನು ಇಡೀ ಜಗತ್ತೇ ಹಾಡಿ ಹೊಗಳಿತ್ತು. ಆದರೆ ಇದೆಲ್ಲದರ ಮಧ್ಯೆ ತಮ್ಮ ದೇಶದಲ್ಲಿಯೇ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಇದರಿಂದ ನೊಂದ ಜಸಿಂಡಾ ಅರ್ಡೆರ್ನ್ ಪ್ರಧಾನಿ ಹುದ್ದೆಗೆ ತಾವು ರಾಜೀನಾಮೆ ನೀಡುತ್ತಿರುವುದಾಗಿ ಗುರುವಾರ ಹೇಳಿದ್ದಾರೆ. ಉಕ್ಕಿಬರುತ್ತಿದ್ದ ಅಶ್ರುಧಾರೆಯನ್ನು ನಿಯಂತ್ರಿಸಿಕೊಂಡ ಅವರು, ಫೆಬ್ರವರಿ 7 ರಂದು ಪ್ರಧಾನಿಯಾಗಿ ತನ್ನ ಕೊನೆಯ ದಿನವಾಗಿದೆ ಎಂದು ನೇಪಿಯರ್‌ನಲ್ಲಿ ಸುದ್ದಿಗಾರರಿಗೆ ಹೇಳಿದರು.
ನಾನು ಪ್ರಧಾನಿಯಾಗಿ ಅಧಿಕಾರದ ಆರನೇ ವರ್ಷವನ್ನು ಪ್ರವೇಶಿಸುತ್ತಿದ್ದೇನೆ ಮತ್ತು ಆ ಎಲ್ಲ ಅವಧಿಗೆ ನಾನು ನನ್ನ ಸಂಪೂರ್ಣ ಶ್ರಮವನ್ನು ನೀಡಿದ್ದೇನೆ ಎಂದು ಅವರು ಹೇಳಿದರು. ನ್ಯೂಜಿಲೆಂಡ್‌ನ ಮುಂದಿನ ಸಾರ್ವತ್ರಿಕ ಚುನಾವಣೆಯು ಅಕ್ಟೋಬರ್ 14 ರಂದು ನಡೆಯಲಿದೆ ಮತ್ತು ಅಲ್ಲಿಯವರೆಗೆ ತಾನು ಶಾಸಕಿಯಾಗಿಯೇ ಇರುವುದಾಗಿಯೂ ಅವರು ಘೋಷಿಸಿದರು. ಆದರೆ ಚುನಾವಣೆಯವರೆಗೂ ಯಾರು ಪ್ರಧಾನಿಯಾಗಿರುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ತನ್ನ ಕೆಲಸ ಅತ್ಯಂತ ಗೌರವಶಾಲಿಯಾಗಿತ್ತು ಮತ್ತು ಅಷ್ಟೇ ಸವಾಲಿನದಾಗಿತ್ತು. ಆದರೆ ಈ ಹುದ್ದೆಯನ್ನು ನಿಭಾಯಿಸುವಾಗ ಅನಿರೀಕ್ಷಿತವಾದುದನ್ನು ಎದುರಿಸಲು ಸಹ ಸಿದ್ಧರಿರಬೇಕು. ಆದರೆ ಇನ್ನೊಂದು ಅವಧಿಗೆ ಪ್ರಧಾನಿಯಾಗಿರಲು ತಮಗೆ ಇಷ್ಟವಿಲ್ಲ ಎಂದು ಅರ್ಡೆರ್ನ್ ಹೇಳಿದರು. ಏತನ್ಮಧ್ಯೆ ಲೇಬರ್ ಪಕ್ಷದ ನಾಯಕತ್ವಕ್ಕೆ ತಾವು ಸ್ಪರ್ಧಿಸುತ್ತಿಲ್ಲ ಎಂದು ಉಪ ಪ್ರಧಾನ ಮಂತ್ರಿ ಗ್ರಾಂಟ್ ರಾಬರ್ಟ್‌ಸನ್ ಘೋಷಿಸಿದ್ದಾರೆ. ಹೀಗಾಗಿ ಪ್ರಧಾನಿ ಹುದ್ದೆಯು ಸ್ಪರ್ಧೆಗೆ ಮುಕ್ತವಾಗಿದೆ.
ಪ್ರಸ್ತುತ ಅರ್ಡೆರ್ನ್ ಕಠಿಣ ಚುನಾವಣಾ ಸವಾಲು ಎದುರಿಸುತ್ತಿದ್ದರು. ಅವರ ಲಿಬರಲ್ ಲೇಬರ್ ಪಾರ್ಟಿಯು ಎರಡು ವರ್ಷಗಳ ಹಿಂದೆ ನಡೆದ ಮರು ಚುನಾವಣೆಯಲ್ಲಿ ಭಾರಿ ಬಹುಮತದಿಂದ ಜಯಗಳಿಸಿತ್ತು. ಆದರೆ ಇತ್ತೀಚಿನ ಚುನಾವಣೆಗಳಲ್ಲಿ ಅವರ ಪಾರ್ಟಿಯು ಪ್ರತಿಪಕ್ಷ ಕನ್ಸರ್ವೇಟಿವ್ ಪಕ್ಷಕ್ಕಿಂತ ಹಿಂದೆ ಉಳಿದಿತ್ತು. ಕೊರೊನಾವೈರಸ್ ಹರಡಿದ ಆರಂಭಿಕ ದಿನಗಳಲ್ಲಿ ಅದರ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳಿಂದಾಗಿ ಜಸಿಂಡಾ ಅರ್ಡೆರ್ನ್ ಅಂತಾರಾಷ್ಟ್ರೀಯ ಸಮುದಾಯದಿಂದ ಉತ್ತಮ ಶ್ಲಾಘನೆ ಪಡೆದಿದ್ದರು. ಕೊರೊನಾವೈರಸ್ನ ಹೊಸ ತಳಿಗಳು ಬರುತ್ತಿದ್ದಂತೆ ಹಾಗೂ ವ್ಯಾಕ್ಸಿನ್ಗಳು ಲಭ್ಯವಾಗುತ್ತಿದ್ದಂತೆ ಶೂನ್ಯ ಸಹಿಷ್ಣುತಾ ನೀತಿಯನ್ನು ಕೈಬಿಡಲಾಗಿತ್ತು.
ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಪ್ರತಿಕ್ರಿಯೆ: ತಮ್ಮ ದೇಶದ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವುದಾಗಿ ಘೋಷಿಸಿರುವ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆನ್ ಅವರನ್ನು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಗುರುವಾರ ಶ್ಲಾಘಿಸಿದ್ದಾರೆ ಮತ್ತು ಭಾರತದ ರಾಜಕೀಯಕ್ಕೆ ಅವರಂಥವರು ಬೇಕು ಎಂದು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಜೈರಾಂ ರಮೇಶ್- ಪ್ರಖ್ಯಾತ ಕ್ರಿಕೆಟ್ ವೀಕ್ಷಕ ವರದಿಗಾರ ವಿಜಯ್ ಮರ್ಚಂಟ್ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿರುವಾಗಲೇ ನಿವೃತ್ತಿ ಘೋಷಿಸಿದ್ದರು. ನೀವು ಯಾಕಿನ್ನೂ ಹೋಗುತ್ತಿಲ್ಲ ಎಂದು ಜನ ಕೇಳುವ ಮುನ್ನ, ಈಗಲೇ ಯಾಕೆ ಹೋಗುತ್ತಿರುವಿರಿ ಎಂದು ಜನ ಕೇಳುವಾಗಲೇ ನಿವೃತ್ತಿಯಾಗಿ. ವಿಜಯ್ ಮರ್ಚಂಟ್ ಅವರಂತೆಯೇ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಪ್ರಧಾನಿ ಹುದ್ದೆ ತೊರೆಯುತ್ತಿದ್ದಾರೆ. ಭಾರತದ ರಾಜಕೀಯಕ್ಕೂ ಅವರಂಥವರು ಬೇಕು ಎಂದು ಬರೆದಿದ್ದಾರೆ.
ಇದನ್ನೂ ಓದಿ: Omicron ಭೀತಿ: ತನ್ನ ಮದುವೆಯನ್ನು ರದ್ದುಪಡಿಸಿದ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ