ನವದೆಹಲಿ/ಜಮ್ಮು: ಜಮ್ಮು-ಕಾಶ್ಮೀರದಲ್ಲಿರುವ ಆತಂಕಕಾರಿ ಸಮಸ್ಯೆಗಳಿಗೆ ‘ಗಾಂಧಿ ಕುಟುಂಬದ ಪರಂಪರೆಯೇ ಕಾರಣ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಆರೋಪಿಸಿದ್ದಾರೆ.
ಕಣಿವೆ ರಾಜ್ಯದ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಶುಕ್ರವಾರ ಜಮ್ಮು-ಕಾಶ್ಮೀರದ ಸಂಯೋಜಿತ ಸಂಸ್ಕೃತಿಯನ್ನು ಒಡೆಯಲು ಆರ್ಎಸ್ಎಸ್ ಮತ್ತು ಬಿಜೆಪಿ ಒಗ್ಗೂಡಿರುವುದಾಗಿ ಆರೋಪಿಸಿದ್ದರು.
ಕಾಶ್ಮೀರಿ ಸಮಸ್ಯೆಗಳಿಗೆ ನೆಹರೂ ಕಾರಣ
ಈ ಕುರಿತು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ, ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕಾಶ್ಮೀರಿ ಪಂಡಿತರನ್ನು ಮಾತ್ರವಲ್ಲದೆ, ಈ ಪ್ರದೇಶದ ಅಭಿವೃದ್ಧಿಯನ್ನೂ ತ್ಯಾಗ ಮಾಡಿದೆ ಎಂದು ದೂರಿದ್ದಾರೆ.
ಕಾಶ್ಮೀರದ ಸಮಸ್ಯೆಗಳಿಗೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಕಾರಣ. ಕಾಶ್ಮೀರಿ ಪಂಡಿತರ ಸಂಕಷ್ಟಗಳಿಗೆ ಕಾಂಗ್ರೆಸ್ ಮತ್ತು ಸಮಾನ ಮನಸ್ಕ ಪಕ್ಷಗಳ ರಾಜಕೀಯವೇ ಕಾರಣ ಎಂದು ಪಾತ್ರ ಆರೋಪಿಸಿದ್ದಾರೆ.
370 ಕಾಯ್ದೆಯನ್ನು ನರೇಂದ್ರ ಮೋದಿ ಸರ್ಕಾರ ರದ್ದುಪಡಿಸುವ ಮೂಲಕ ಮಹಿಳೆಯರು, ನಿರಾಶ್ರಿತರ ಮೇಲಿನ ಎಲ್ಲಾ ತಾರತಮ್ಯಗಳನ್ನು ಕೊನೆಗೊಳಿಸಿದ್ದಾರೆ ಎಂದರು.
ಕಾಂಗ್ರೆಸ್ನಿಂದ ಪಾಪದ ಕೆಲಸ
ಜಮ್ಮು-ಕಾಶ್ಮೀರದ ಬಿಜೆಪಿ ಮುಖ್ಯಸ್ಥ ರವೀಂದರ್ ರೈನಾ ಮಾತನಾಡಿ, ರಾಹುಲ್ ಗಾಂಧಿ ಉದ್ದೇಶಪೂರ್ವಕವಾಗಿ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ. ಅವರಿಗೆ ಹಿಂದೂ ಧಾರ್ಮಿಕ ಚಟುವಟಿಕೆಗಳ ಮೇಲೆ ನಂಬಿಕೆಯಿಲ್ಲ. ನರೇಂದ್ರ ಮೋದಿಯವರ ಒಳ್ಳೆಯ ಕೆಲಸಗಳಿಂದ ಅವರು ಭಯಭೀತರಾಗಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಸಾಕಷ್ಟು ಪಾಪದ ಕೆಲಸಗಳನ್ನು ಮಾಡಿದ್ದು, ಅದರಿಂದ ಮುಕ್ತಗೊಳ್ಳಲು ರಾಹುಲ್ ಗಾಂಧಿ ವೈಷ್ಣೋದೇವಿ ಮೊರೆ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.