ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಶ್ರೀನಗರದ ಶೋರ್ ಅಫಕ್ ಲೇಕ್ ದಾಲ್‌ನಲ್ಲಿ ಇಂದು ಬೆಳಗ್ಗೆ ಹೌಸ್‌ಬೋಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೂರಕ್ಕೂ ಬೋಟ್ಗಳು ಬೆಂಕಿಗಾಹುತಿಯಾಗಿವೆ. ಸುದ್ದಿ ತಿಳಿದ ತಕ್ಷಣವೇ ಅಗ್ನಿಶಾಮಕ ದಳ ಘಟನಾ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಯಿತು.
ಈ ಬೆಂಕಿ ಅವಘಡ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಅಗ್ನಿಶಾಮಕ ಮತ್ತು ತುರ್ತು ವಿಭಾಗದ ಅಧಿಕಾರಿಯೊಬ್ಬರು, ಗಾರ್ಡ್ ನಂ. 9 ರ ಸಮೀಪವಿರುವ ಕೆರೆಯಲ್ಲಿ ಹೌಸ್‌ಬೋಟ್‌ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ನಮಗೆ ಇಂದು ಮುಂಜಾನೆ ಮಾಹಿತಿ ಬಂದಿತ್ತು. ಸುದ್ದಿ ತಿಳಿದ ಕೂಡಲೇ ನಮ್ಮ ತಂಡವು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸಲು ಆರಂಭಿಸಿತು. ಅಷ್ಟರೊಳಗೆ ಎರಡು ಮೂರು ದೋಣಿಗಳಿಗೆ ಬೆಂಕಿ ವ್ಯಾಪಿಸಿತ್ತು. ಈ ಘಟನೆಯಲ್ಲಿ ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಬೆಂಕಿ ನಿಯಂತ್ರಣಕ್ಕೆ ಬಂದ ನಂತರ ಎಷ್ಟು ಹಾನಿಯಾಗಿದೆ ಎಂದು ಅಂದಾಜಿಸಲಾಗುತ್ತದೆ ಎಂದು ಅಗ್ನಿಶಾಮಕ ದಳದ ಅಧಿಕಾರಿ ತಿಳಿಸಿದರು. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ನಿನ್ನೆ ಸಂಜೆ ಶ್ರೀನಗರದ ಹಮಾಮಾ ಪ್ರದೇಶದಲ್ಲಿ ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಂದಿಸಲು ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡ ಗಾಯಗೊಂಡಿದ್ದರು.
ಓದಿ: ಮೈಸೂರು: ಸೌತ್ ಇಂಡಿಯನ್ ಪೇಪರ್ ಮಿಲ್ನಲ್ಲಿ ಕಾಣಿಸಿಕೊಂಡ ಬೆಂಕಿ; ಲಕ್ಷಾಂತರ ಮೌಲ್ಯದ ವಸ್ತು ಭಸ್ಮ
ಸೆಣಬಿನ ಗೋದಾಮಿನಲ್ಲಿ ಬೆಂಕಿ: ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಫ್ರೆಶರ್ ರಸ್ತೆಯಲ್ಲಿರುವ ಸೆಣಬು ತಯಾರು ಮಾಡುತ್ತಿದ್ದ ಗೋದಾಮಿನಲ್ಲಿ ನಿನ್ನೆ ಬೆಳಗ್ಗೆ ಭೀಕರ ಅಗ್ನಿ ಅವಘಡ ಸಂಭವಿಸಿತ್ತು. ಈ ಬೆಂಕಿ ಅವಘಡದ ನಂತರ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಗ್ನಿಶಾಮಕ ದಳದ 15 ಇಂಜಿನ್‌ಗಳ ಸಹಾಯದಿಂದ ಬೆಂಕಿಯನ್ನು ಹತೋಟಿಗೆ ತರಲಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಲು ತೀವ್ರ ಹರಸಾಹಸ ಪಡಬೇಕಾಯಿತು. ಕಾರ್ಖಾನೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಸ್ವಲ್ಪ ಹೊತ್ತಿನಲ್ಲೇ ಬೆಂಕಿ ವ್ಯಾಪಿಸಿದೆ ಎಂದು ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಕಾರ, ಬೆಂಕಿಗೆ ಕಾರಣ ತಿಳಿದುಬಂದಿರಲಿಲ್ಲ. ಗೋದಾಮಿನಲ್ಲಿ ಪ್ಲಾಸ್ಟಿಕ್, ಕ್ರೋಸನ್ ಆಯಿಲ್ ಮತ್ತು ರಾಸಾಯನಿಕಗಳು ಇದ್ದ ಕಾರಣ ಬೆಂಕಿ ವ್ಯಾಪಕವಾಗಿ ಹಬ್ಬಿದೆ. ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ಶಾರ್ಟ್ ಸರ್ಕ್ಯೂಟ್ ಆಗಿರುವ ಶಂಕೆಯಿದೆ. ಇದರಿಂದ ಬೆಂಕಿ ಸಹ ಸಂಭವಿಸಬಹುದು. ಇದನ್ನು ನಿರ್ಲಕ್ಷಿಸಲಾಗುವುದಿಲ್ಲ. ಈ ಘಟನೆಯಲ್ಲಿ ಯಾರಿಗೆ ತೊಂದರೆಯಾಗಿಲ್ಲ. ಆದರೆ ಭಾರಿ ಆರ್ಥಿಕ ನಷ್ಟವಾಗಿದೆ ಎಂದು ತಿಳಿಸಿದರು.