ಶ್ರೀನಗರ(ಜಮ್ಮು-ಕಾಶ್ಮೀರ): ಕುತಂತ್ರಿ ಪಾಕಿಸ್ತಾನ ಗಡಿಭಾಗದಲ್ಲಿ ಒಂದಿಲ್ಲೊಂದು ಕಿತಾಪತಿ ಮಾಡುತ್ತಲೇ ಇರುತ್ತದೆ. ಇದೀಗ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಪ್ರದೇಶದಲ್ಲಿ ಪಾಕಿಸ್ತಾನ ಸೈನಿಕರು ಅಕ್ರಮವಾಗಿ ಬಂಕರ್ ಅಥವಾ ಪೋಸ್ಟ್ ನಿರ್ಮಾಣ ಮಾಡುತ್ತಿದ್ದು, ಅದಕ್ಕೆ ಭಾರತೀಯ ಸೇನೆ ಆಕ್ಷೇಪ ವ್ಯಕ್ತಪಡಿಸಿದೆ.
ಕುಪ್ವಾರದ ಥೀತ್ವಾಲ್ ಪ್ರದೇಶದಲ್ಲಿ ಗಡಿ ನಿಯಂತ್ರಣ ರೇಖೆಯ ಸಮೀಪ ಪಾಕಿಸ್ತಾನ ರೇಂಜರ್‌ಗಳು ಅಕ್ರಮವಾಗಿ ನಿರ್ಮಾಣ ಚಟುವಟಿಕೆ ಕೈಗೊಂಡಿರುವುದನ್ನು ಭಾರತೀಯ ಸೈನಿಕರು ಗಮನಿಸಿದ್ದಾರೆ. ಭಾರತದ ಭೂಭಾಗದ ಕಡೆಯಿಂದ 500 ಮೀಟರ್ ಅಂತರದೊಳಗೆ ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ಧ್ವನಿವರ್ಧಕಗಳ ಮೂಲಕ ಭಾರತೀಯ ಸೇನೆಯಿಂದ ಆಕ್ಷೇಪಣೆ ಎತ್ತಿದೆ.
ಇದನ್ನೂ ಓದಿ: ಅಶ್ಲೀಲ ಫೋಟೋ ತೋರಿಸಿ ಬ್ಲಾಕ್ಮೇಲ್.. ಇಬ್ಬರು ಯುವತಿಯರಿಂದ ಯುವಕನ ಕೊಲೆ
ಭಾರತದ ವಿರೋಧದ ಬಳಿಕ ನಿರ್ಮಾಣ ಕಾರ್ಯವನ್ನು ಪಾಕಿಸ್ತಾನ ನಿಲ್ಲಿಸಿದೆ. ಆ ಪ್ರದೇಶದಲ್ಲಿ ಪಾಕಿಸ್ತಾನ ನಿಖರವಾಗಿ ಏನು ನಿರ್ಮಾಣ ಮಾಡುತ್ತಿದೆ ಎಂಬುದು ತಿಳಿದು ಬಂದಿಲ್ಲ. ಬಂಕರ್ ಅಥವಾ ಪೋಸ್ಟ್ ಸ್ಥಾಪಿಸುತ್ತಿರಬಹುದು ಎಂದು ಸೇನಾಧಿಕಾರಿಗಳು ಶಂಕಿಸಿದ್ದಾರೆ.
ನಿಯಮದ ಪ್ರಕಾರ ಗಡಿ ಪ್ರದೇಶದಲ್ಲಿ ಉಭಯ ದೇಶಗಳು ನಿರ್ಮಾಣ ಕಾರ್ಯದಲ್ಲಿ ತೊಡಗುವ ಮುನ್ನ ಇನ್ನೊಂದು ದೇಶಕ್ಕೆ ಮಾಹಿತಿ ನೀಡಬೇಕಿದೆ. ಆದರೆ, ಪಾಕಿಸ್ತಾನ ಈ ನಿಯಮ ಪಾಲಿಸದೇ ನಿರ್ಮಾಣಕ್ಕೆ ಕೈಹಾಕಿದೆ. ಇದನ್ನೇ ಭಾರತ ವಿರೋಧಿಸಿದ್ದು, ಆಕ್ಷೇಪಣೆ ಸಲ್ಲಿಸಿದೆ.