ಶ್ರೀನಗರ (ಜಮ್ಮು- ಕಾಶ್ಮೀರ): ಕೊನೆಗೂ ಜಮ್ಮು ಮತ್ತು ಕಾಶ್ಮೀರ ಆಡಳಿತವು 'ಕಾಲಿಜ್ ಫೆಸೆಂಟ್' ಅನ್ನು ಕೇಂದ್ರಾಡಳಿತ ಪ್ರದೇಶ (ಯುಟಿ) ದ ಪಕ್ಷಿಯೆಂದು ಘೋಷಿಸಿದ್ದು, ಹಿಮ ಸಾರಂಗವನ್ನು ಕೇಂದ್ರಾಡಳಿತ ಪ್ರದೇಶದ ಪ್ರಾಣಿಯಾಗಿ ಉಳಿಸಿಕೊಂಡಿದೆ.
ಅರಣ್ಯ ಮತ್ತು ಪರಿಸರ ಇಲಾಖೆ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಕಾಲಿಜ್ ಫೆಸೆಂಟ್ ಅನ್ನು ಕೇಂದ್ರಾಡಳಿತ ಪ್ರದೇಶದ ಪಕ್ಷಿಯೆಂದು ಘೋಷಿಸಲು ಅನುಮೋದನೆ ನೀಡಿದ್ದಾರೆ.
2019ರ ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ನೀಡುವ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಲಾಯಿತು. ಬಳಿಕ ಜಮ್ಮು ಮತ್ತು ಕಾಶ್ಮೀರದ ಪ್ರಾಣಿ ಮತ್ತು ಪಕ್ಷಿ ಯಾವುದೆಂಬುದರ ಬಗ್ಗೆ ಗೊಂದಲ ನಿರ್ಮಾಣವಾಗಿತ್ತು.
ಆಗಸ್ಟ್ 31 ರಂದು, ಲಡಾಖ್ ಆಡಳಿತವು ಹಿಮ ಚಿರತೆಯನ್ನು ಲಡಾಖ್ ಯುಟಿ ಪ್ರಾಣಿಯಾಗಿ ಹಾಗೂ ಕಪ್ಪು ಕುತ್ತಿಗೆಯ ಕೊಕ್ಕರೆಯನ್ನು ( black-necked crane) ಲಡಾಖ್ ಯುಟಿ ಪಕ್ಷಿಯಾಗಿ ಘೋಷಿಸಿತು. ಇದೀಗ ಜಮ್ಮು ಮತ್ತು ಕಾಶ್ಮೀರ ಆಡಳಿತವು ಈ ಹಿಂದೆ ಇದ್ದಂತೆ ಹಿಮ ಸಾರಂಗವನ್ನು ಯುಟಿ ಪ್ರಾಣಿಯಾಗಿ ಉಳಿಸಿಕೊಂಡಿದ್ದು, ಕಾಲಿಜ್ ಫೆಸೆಂಟ್ ಅನ್ನು ಯುಟಿ ಪಕ್ಷಿಯಾಗಿ ಘೋಷಿಸಿದೆ.
ಕಾಲಿಜ್ ಫೆಸೆಂಟ್
ಇದು ಹಿಮಾಲಯ ಶ್ರೇಣಿಗಳಲ್ಲಿ ಕಂಡು ಬರುವ ಪಕ್ಷಿಯಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ವ್ಯಾಪಕವಾಗಿ ಕಾಣಸಿಗುತ್ತದೆ. ಇದು ಅಳಿವಿನಂಚಿನಲ್ಲಿಲ್ಲದಿದ್ದರೂ ವಿಶೇಷ ಕಾಳಜಿ ವರ್ಗದಲ್ಲಿ ಬರುತ್ತದೆ. ಗಂಡು ಹಕ್ಕಿಗಳು ವರ್ಣಮಯವಾಗಿದ್ದು, ಹೆಣ್ಣು ಹಕ್ಕಿ ಬೂದು ಬಣ್ಣದಲ್ಲಿರುತ್ತವೆ. ಎರಡೂ ಹಕ್ಕಿಗಳು ಕೆಂಪು ಬಣ್ಣದ ತಲೆಗಳನ್ನು ಹೊಂದಿರುತ್ತವೆ. ಗಂಡು ಹಕ್ಕಿಗಳು 63 ರಿಂದ 70 ಸೆಂ.ಮೀ ಎತ್ತರ ಹಾಗೂ ಹೆಣ್ಣು ಹಕ್ಕಿಗಳು 50 ರಿಂದ 60 ಸೆಂ.ಮೀ ಎತ್ತರ ಇರುತ್ತವೆ.