ನವದೆಹಲಿ: ಕರ್ನಾಟಕದಲ್ಲಿ ಉದ್ಭವಿಸಿದ ಹಿಜಾಬ್ ವಿವಾದ ಕೆಲವು ರಾಜ್ಯಗಳಿಗೂ ಕಾಲಿಟ್ಟಿದ್ದು, ಜಮ್ಮು ಮತ್ತು ಕಾಶ್ಮೀರಕ್ಕೂ ಸ್ಥಳಾಂತರಗೊಂಡಿದೆ. ಈ ವರ್ಷದ 12 ನೇ ತರಗತಿಯಲ್ಲಿ ಟಾಪರ್ ಆಗಿರುವ ಅರೂಸಾ ಪರ್ವೇಜ್ ಅವರನ್ನು ಹಿಜಾಬ್ ಧರಿಸದೇ ಇರುವುದರಿಂದ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿದ್ದು, ಇದಕ್ಕೆ ಅರೂಸಾ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ವರ್ಷ ಜಮ್ಮು ಮತ್ತು ಕಾಶ್ಮೀರ ಬೋರ್ಡ್‌ನ 12 ನೇ ತರಗತಿ ಪರೀಕ್ಷೆಯಲ್ಲಿ ಅರೂಸಾ ಪರ್ವೇಜ್ 500ಕ್ಕೆ 499 ಅಂಕ ಪಡೆದು ಅಗ್ರಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ. ಅರೂಸಾ, ಹಿಜಾಬ್ ಧರಿಸಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅವರ ಫಾಲೋವರ್ಸ್ ಶೇರ್ ಮಾಡಿದ್ದು, ನಂತರ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಲಾಗಿತ್ತು.
ಕರ್ನಾಟಕದಲ್ಲಿ ಮುಸ್ಲಿಂ ಹುಡುಗಿಯರು ಹಿಜಾಬ್‌ಗಾಗಿ ಹೋರಾಡುತ್ತಾರೆ ಮತ್ತು ನಮ್ಮ ಕಾಶ್ಮೀರದಲ್ಲಿ ನಮ್ಮ ಸಹೋದರಿಯರು ತಮ್ಮ ಮುಖವನ್ನು ಮುಚ್ಚದೆ ಅವರ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಾರೆ. ಇದನ್ನು ಖಂಡಿಸುತ್ತೇವೆ ಎಂದು ಕೆಲ ಟ್ರೋಲರ್ಗಳು ಕಮೆಂಟ್ ಮಾಡಿದ್ದರು. ಇನ್ನೂ ಕೆಲವರು ಅರೂಸಾ ಪರ್ವೇಜ್ ಹಿಜಾಬ್ ಧರಿಸಿದ ಕಾರಣ ಆಕೆಯ ಶಿರಚ್ಛೇದನ ಮಾಡಿ ಎಂದು ಕರೆ ನೀಡಿ ಕಮೆಂಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಪರ್ವೇಜ್, 'ನಾನು ಇಸ್ಲಾಮಿಕ್ ತತ್ವಗಳನ್ನು ಅನುಸರಿಸುತ್ತೇನೆ. ಉತ್ತಮ ಮುಸ್ಲಿಂ ಎಂದು ಸಾಬೀತುಪಡಿಸಲು ಹಿಜಾಬ್ ಧರಿಸುವ ಅಗತ್ಯವಿಲ್ಲ. ಹಿಜಾಬ್ ಧರಿಸುವುದು ಅಥವಾ ಧರಿಸದಿರುವುದು ಅವರ ಧರ್ಮದಲ್ಲಿ ನಂಬಿಕೆಯನ್ನು ವ್ಯಾಖ್ಯಾನಿಸುವುದಿಲ್ಲ. ನೀವು ಟ್ರೋಲ್ ಮಾಡುವುದಕ್ಕಿಂತ ಹೆಚ್ಚಾಗಿ ನಾನು ಅಲ್ಲಾನನ್ನು ಪ್ರೀತಿಸುತ್ತೇನೆ. ನಾನು ಹೃದಯದಿಂದ ಮುಸ್ಲಿಂ, ಹಿಜಾಬ್‌ನಿಂದ ಅಲ್ಲ' ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಉಲ್ಲೇಖಿಸಿ ಪೋಸ್ಟ್ ಮಾಡಿದ್ದಾರೆ.
ಅರೂಸಾ ಪರ್ವೇಜ್ ಹೇಳಿಕೆಯನ್ನು ಟ್ವೀಟ್ ಮಾಡಿರುವ ಸಿ.ಟಿ.ರವಿ, ಇದು ಧೈರ್ಯದ ಮುಖ. ಉತ್ತಮ ಮುಸ್ಲಿಂ ಎಂದು ಸಾಬೀತುಪಡಿಸಲು ಹಿಜಾಬ್ ಧರಿಸುವ ಅಗತ್ಯವಿಲ್ಲ ಎಂದು ಕಾಶ್ಮೀರದ 12 ನೇ ತರಗತಿ ಟಾಪರ್ ಅರೂಸಾ ಪರ್ವೇಜ್ ಹೇಳಿದ್ದಾರೆ ಅಂತಾ ವಿದ್ಯಾರ್ಥಿನಿಯ ಹೇಳಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.