ನವದೆಹಲಿ: ಅಕ್ಟೋಬರ್ 17ರಂದು ಕಾಣೆಯಾಗಿದ್ದ ಮೂವರು ಚಾರಣಿಗರ ಮೃತದೇಹಗಳನ್ನು ಹಿಮಾಚಲ ಪ್ರದೇಶದಲ್ಲಿರುವ ಬರುವಾ ಪಾಸ್ ಬಳಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಗುರುವಾರ ಪತ್ತೆ ಮಾಡಿದೆ.
ಮೃತದೇಹಗಳನ್ನು ಹಿಮದಿಂದ ಹೊರಗೆ ತೆಗೆಯಲಾಗುತ್ತಿದೆ. ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ನ 17ನೇ ಬೆಟಾಲಿಯನ್ನ ಸಿಬ್ಬಂದಿ ಮೃತದೇಹಗಳನ್ನು ಸಾಗಿಸಲಿದ್ದಾರೆ. ಗುರುವಾರ ಸಂಜೆಯ ವೇಳೆಗೆ ಮೃತದೇಹಗಳು ಮುಖ್ಯರಸ್ತೆಗೆ ತಲುಪುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈಗ ಸಿಕ್ಕ ಮೃತದೇಹಗಳು ದೀಪಕ್ ರಾವ್, ಅಶೊನ್ ಬಾಲೆ ಮತ್ತು ರಾಜೇಂದ್ರ ಪಾಠಕ್ ಎಂಬುವರದ್ದು ಎಂದು ಗುರ್ತಿಸಲಾಗಿದ್ದು, ಅವರೆಲ್ಲರೂ ಮಹಾರಾಷ್ಟ್ರಕ್ಕೆ ಸೇರಿದವರಾಗಿದ್ದಾರೆ. ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ನಡೆದ ಹಿಮಪಾತದಿಂದ ಅವರು ಸಾವನ್ನಪ್ಪಿದ್ದಾರೆ. ಇದಕ್ಕೂ ಮುನ್ನ ಅಕ್ಟೋಬರ್ 25ರಂದು 10 ಮಂದಿ ಚಾರಣಿಗರನ್ನು ರಕ್ಷಣೆ ಮಾಡಲಾಗಿತ್ತು.
ಮಹಾರಾಷ್ಟ್ರದ 12 ಮಂದಿ ಚಾರಣಿಗರು ಮತ್ತು ಪಶ್ಚಿಮ ಬಂಗಾಳದ ಓರ್ವ ಚಾರಣಿಗ ಅಕ್ಟೋಬರ್ 17ರಂದು ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ರೋಹ್ರು ಪ್ರದೇಶದಿಂದ ಬರುವಾ ಗ್ರಾಮಕ್ಕೆ ಟ್ರೆಕ್ಕಿಂಗ್ ಆರಂಭಿಸಿದ್ದರು. ನಂತರ ಹಿಮಪಾತದ ಕಾರಣದಿಂದಾಗಿ ಕಾಣೆಯಾಗಿದ್ದರು. ಈಗ ಮೂವರ ಮೃತದೇಹ ಹೊರ ತೆಗೆಯಲಾಗಿದೆ.
ಹಿಮಾಚಲ ಪ್ರದೇಶದ ಚಿಟ್ಕುಲ್ ಪ್ರದೇಶದಿಂದ ಉತ್ತರಕಾಶಿಯ ಹರ್ಷಿಲ್ಗೆ ಟ್ರೆಕ್ಕಿಂಗ್ ಆರಂಭಿಸಿದ್ದ 17 ಮಂದಿಯಿಂದ ಮತ್ತೊಂದು ತಂಡ ಹಿಮಪಾತದಲ್ಲಿ ಸಿಲುಕಿತ್ತು. ಈ ತಂಡದಲ್ಲಿ 11 ಮಂದಿ ಕಾಣೆಯಾಗಿದ್ದರು. ಅವರನ್ನು ಹುಡುಕುವ ಕಾರ್ಯ ಮುಂದುವರೆದಿದೆ. ಈ ತಂಡದಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, ಇಬ್ಬರನ್ನು ರಕ್ಷಿಸಲಾಗಿದೆ. ಇನ್ನಿಬ್ಬರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಇದನ್ನೂ ಓದಿ: ಶಿವಾಜಿ ಮಹಾರಾಜರ ನಾಡಿನಲ್ಲಿ ನಮಗೆ ಪ್ರತಿದಿನ ಅವಮಾನ, ರಕ್ಷಿಸಿ: ಸಮೀರ್ ವಾಂಖೆಡೆ ಪತ್ನಿ ಮನವಿ