ಕೋಲ್ಕತ್ತಾ(ಪಶ್ಚಿಮ ಬಂಗಾಳ): ಮಾರ್ಚ್ 7 ರಂದು ಪ್ರಧಾನಿ ನರೇಂದ್ರ ಮೋದಿ ಪಶ್ಚಿಮಬಂಗಾಳದ ಕೋಲ್ಕತ್ತಾದಲ್ಲಿ ರ‍್ಯಾಲಿ ನಡೆಸಲಿದ್ದಾರೆ. ಈ ರ‍್ಯಾಲಿಯಲ್ಲಿ ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಪಾಲ್ಗೊಳ್ಳುವ ವಿಚಾರ ಅವರಿಗೆ ಬಿಟ್ಟಿದ್ದು ಎಂದು ಬಿಜೆಪಿ ಹೇಳಿದೆ.
ನಗರದಲ್ಲಿ ನಡೆದಾಡುತ್ತಿದ್ದ ಗಾಳಿ ಸುದ್ದಿಗೆ ಕೊನೆಗೂ ಬಿಜೆಪಿ ತೆರೆ ಹೇಳಿದೆ. ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಮಾರ್ಚ್ 7 ಭಾನುವಾರ ಪ್ರಧಾನಿ ನಗರದಲ್ಲಿ ರ‍್ಯಾಲಿ ಕೈಗೊಳ್ಳಲಿದ್ದಾರೆ. ಅಂದು ಸೌರವ್ ಗಂಗೂಲಿ ಪ್ರಚಾರಕ್ಕೆ ಹಾಜರಾಗುವ ವಿಚಾರ ಅವರಿಗೆ ಬಿಟ್ಟಿದ್ದೇವೆ. ಅವರು ಪ್ರಚಾರಕ್ಕೆ ಆಗಮಿಸುತ್ತಾರೆ ಅಂದ್ರೆ ನಾವು ಅತ್ಯಂತ ಗೌರವದಿಂದ ಸ್ವಾಗತಿಸುತ್ತೇವೆ ಎಂದು ಬಿಜೆಪಿ ವಕ್ತಾರ ಶಮಿಕ್ ಭಟ್ಟಾಚಾರ್ಯ ಹೇಳಿದರು.
ಆಂಜಿಯೋಪ್ಲ್ಯಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾದ ಮೂರು ದಿನಗಳ ನಂತರ ಅಂದ್ರೆ ಜನವರಿ 31 ರಂದು ಗಂಗೂಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜನವರಿ ಆರಂಭದಲ್ಲಿ ಲಘು ಹೃದಯಾಘಾತಕ್ಕೆ ಒಳಗಾದ ನಂತರ ಗಂಗೂಲಿಗೆ ಟ್ರಿಪಲ್ ವೆಸೆಲ್ ಕಾಯಿಲೆ ಇರುವುದು ಪತ್ತೆಯಾಯಿತು. ಹೀಗಾಗಿ ಅವರು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಮೂರ್ನಾಲ್ಕು ದಿನಗಳ ಹಿಂದೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದ್ರೆ ನಗರದಲ್ಲಿ ಸೌರವ್ ಗಂಗೂಲಿ ಪ್ರಧಾನಿ ಮೋದಿ ರ‍್ಯಾಲಿಗೆ ಭಾಗಿಯಾಗುತ್ತಿದ್ದಾರೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿತ್ತು. ಈ ಹಿನ್ನೆಲೆ ಬಿಜೆಪಿ ವಕ್ತಾರ ಈ ಬಗ್ಗೆ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಸೌರವ್ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆಂದು ನಮಗೆ ತಿಳಿದಿದೆ. ಆರೋಗ್ಯ ಪರಿಸ್ಥಿತಿಗಳನ್ನು ಪರಿಗಣಿಸಿ ರ‍್ಯಾಲಿಯಲ್ಲಿ ಭಾಗಿಯಾಗುತ್ತಾರೆ ಎಂದಾದರೆ ಅವರ ನಿರ್ಧಾರವನ್ನ ನಾವೂ ಸ್ವಾಗತಿಸುತ್ತೇವೆ. ಅವರು ರ‍್ಯಾಲಿಯಲ್ಲಿ ಭಾಗಿಯಾದ್ರೆ ಜನರು ಮತ್ತು ಅಭಿಮಾನಿಗಳು ಇಷ್ಟಪಡುತ್ತಾರೆ. ಆದರೆ ಅವರು ರ‍್ಯಾಲಿಗೆ ಹಾಜರಾಗುವುದು - ಬಿಡುವುದು ಅವರಿಗೇ ಬಿಟ್ಟ ವಿಚಾರ ಎಂದು ಭಟ್ಟಾಚಾರ್ಯ ಹೇಳಿದ್ದಾರೆ.
ಈ ವಿಷಯದ ಬಗ್ಗೆ 48 ವರ್ಷದ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಅವರು ರಾಜಕೀಯಕ್ಕೆ ಸೇರುತ್ತಾರೆ ಎಂಬ ಊಹಾಪೋಹಗಳಿವೆ.