ದಾಮೋಹ್(ಮಧ್ಯಪ್ರದೇಶ) : ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಪುರಸಭೆ ಅಧ್ಯಕ್ಷ ಶಂಕರ್ ರೈ ಮತ್ತು ಅವರ ಸಹೋದರರ ನಿವಾಸದ ಮೇಲೆ ಆದಾಯ ತೆರಿಗೆ(IT) ಇಲಾಖೆ ಗುರುವಾರ ದಾಳಿ ನಡೆಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಐಟಿ ಇಲಾಖೆ ಸಿಬ್ಬಂದಿ ಮತ್ತು ಇಂದೋರ್, ಭೋಪಾಲ್, ಜಬಲ್ಪುರ ಮತ್ತು ಗ್ವಾಲಿಯರ್‌ನ ಪೊಲೀಸರು ಸೇರಿ ಸುಮಾರು 200 ಸಿಬ್ಬಂದಿ ಉದ್ಯಮಿ ಶಂಕರ್ ರೈ ಮತ್ತು ಅವರ ಸಹೋದರರಾದ ಕಮಲ್ ರೈ, ರಾಜು ರೈ ಮತ್ತು ಸಂಜಯ್ ರೈ ಅವರ ಮನೆಯಲ್ಲಿ ಶೋಧ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ರೈ ಕುಟುಂಬವು ಮದ್ಯ ಮತ್ತು ಸಾರಿಗೆ ವ್ಯವಹಾರದಲ್ಲಿ ತೊಡಗಿದೆ. ಜತೆಗೆ ದಮೋಹ್‌ನಲ್ಲಿ ಪೆಟ್ರೋಲ್ ಬಂಕ್‌ಗಳನ್ನು ಸಹ ನಡೆಸುತ್ತಿದೆ. ಶಂಕರ್ ರೈ ಅವರ ಸಹೋದರರಲ್ಲಿ ಒಬ್ಬರಾದ ಕಮಲ್ ರೈ ಬಿಜೆಪಿ ನಾಯಕರಾಗಿದ್ದಾರೆ. ದಾಮೋಹ್‌ನಲ್ಲಿ ಪೆಟ್ರೋಲ್ ಬಂಕ್‌ಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ನೋಂದಣಿಯಾಗಿರುವ ಮದ್ಯದಂಗಡಿಗಳ ಪಟ್ಟಿಯನ್ನು ಹೊಂದಿರುವ ದಾಖಲೆಗಳನ್ನು ಸಹ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಮಾ ವೈಷ್ಣೋದೇವಿ ಬಸ್ನಲ್ಲಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಮಹೇಂದ್ರ ಚೌರಾಸಿಯಾ ಎಂಬ ವ್ಯಕ್ತಿಯ ಹೆಸರಿಗೆ ಮೂರು ಮದ್ಯದಂಗಡಿಗಳನ್ನು ಮಂಜೂರು ಮಾಡಿರುವುದು ಸಹ ಇದೇ ವೇಳೆ ಬೆಳಕಿಗೆ ಬಂದಿದೆ.
ಜಬಲ್ಪುರದಿಂದ ಆಗಮಿಸಿದ ಆದಾಯ ತೆರಿಗೆ ಇಲಾಖೆಯ ತಂಡದ ಕ್ರಮದಿಂದ ಕೋಪಗೊಂಡ ಕುಟುಂಬವು ದಾಳಿಯ ವಿರುದ್ಧ ಪ್ರತಿಭಟನೆ ನಡೆಸಿದೆ. ಮಾಹಿತಿ ತಿಳಿದ ತಕ್ಷಣ ಪೊಲೀಸ್ ವರಿಷ್ಠಾಧಿಕಾರಿ ಡಿ.ಆರ್.ತೆನಿವಾರ್ ಸೇರಿದಂತೆ ಪೊಲೀಸ್ ಪಡೆ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ದಾಳಿ ವೇಳೆ ಅಂದಾಜು 6 ಕೋಟಿ ಮೌಲ್ಯದ ಬೇನಾಮಿ ಆಸ್ತಿಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಮತಾಂತರದ ವಿರುದ್ಧ ದೇಶಾದ್ಯಂತ ಕಠಿಣ ಕಾನೂನು ರಚನೆಗೆ ವಿಹೆಚ್‌ಪಿ ಆಗ್ರಹ