ಶ್ರೀಹರಿಕೋಟ (ನೆಲ್ಲೂರು): ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಅಡಿಯಲ್ಲಿ ದೇಶಾದ್ಯಂತ ಇರುವ ತನ್ನ ಕೇಂದ್ರಗಳಿಂದ ಹಲವು ರಾಜ್ಯಗಳಿಗೆ ಇಸ್ರೋ ಆಕ್ಸಿಜನ್ ಸರಬರಾಜು ಮಾಡುತ್ತಿದೆ.
ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶ್ರೀಹರಿಕೋಟ (ಎಸ್‌ಎಚ್‌ಆರ್) ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (ಎಸ್‌ಎಚ್‌ಎಸ್‌ಸಿ) ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಆಸ್ಪತ್ರೆಗಳಿಗೆ ಆಮ್ಲಜನಕವನ್ನು ಪೂರೈಸುತ್ತಿದೆ. ಜಿಎಸ್ಎಲ್ವಿ ರಾಕೆಟ್‌ನಲ್ಲಿ ಕ್ರಯೋಜೆನಿಕ್ ಎಂಜಿನ್‌ಗೆ ಆಕ್ಸಿಡೈಸರ್ ಆಗಿ ಬಳಸಲಾಗುವ ದ್ರವ ಆಮ್ಲಜನಕ (ಎಲ್‌ಎಎಕ್ಸ್)ವನ್ನು ಸ್ವಲ್ಪ ಮಾರ್ಪಡಿಸಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ನೀಡಲಾಗುತ್ತಿದೆ.
ಕೇರಳದ ತುಂಬಾದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಪ್ರಮುಖ ಬಾಹ್ಯಾಕಾಶ ಸಂಶೋಧನಾ ಕೇಂದ್ರವಾದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರವು ಏಪ್ರಿಲ್ನಿಂದ ಇಲ್ಲಿಯತನಕ ಕೇರಳ ಮತ್ತು ತಮಿಳುನಾಡು ಸರ್ಕಾರಗಳಿಗೆ 150 ಟನ್ ದ್ರವ ಆಮ್ಲಜನಕವನ್ನು ಪೂರೈಸಿದೆ.
ಇನ್ನು ಗುಜರಾತ್‌ನ ಅಹಮದಾಬಾದ್‌ನ ಆಸ್ಪತ್ರೆಗಳಿಗೆ ಇಸ್ರೋ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದಲ್ಲಿರುವ ತನ್ನ ಟ್ಯಾಂಕ್‌ಗಳಿಂದ ಸುಮಾರು 1.65 ಲಕ್ಷ ಲೀಟರ್ ದ್ರವ ಸಾರಜನಕವನ್ನು ದ್ರವ ಆಮ್ಲಜನಕವಾಗಿ ಪರಿವರ್ತಿಸಿ ನೀಡಿದೆ.