ರಾಂಚಿ,ಜಾರ್ಖಂಡ್: ಭಾರತದ ಚುನಾವಣಾ ಆಯೋಗವು ಚುನಾವಣಾ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಜಾರ್ಖಂಡ್ನ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಶಿಫಾರಸು ಮಾಡಿದೆ. ಸದ್ಯ ಪ್ರಕ್ಷುದ್ಧಗೊಂಡಿರುವ ಜಾರ್ಖಂಡ್ನ ರಾಜಕೀಯ ವಲಯದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಅಧ್ಯಕ್ಷರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು, ಅವರ ಪತ್ನಿ ಕಲ್ಪನಾ ಸೊರೆನ್ ಅವರನ್ನು ಉನ್ನತ ಹುದ್ದೆಗೆ ನೇಮಿಸುತ್ತಾರೆ ಎಂಬ ವದಂತಿಗಳು ಹರಿದಾಡುತ್ತಿವೆ.
ಇನ್ನೊಂದು ಕಡೆ ಮುಖ್ಯಮಂತ್ರಿ ಹುದ್ದೆಗೆ ಮತ್ತೊಂದು ಸಂಭಾವ್ಯ ಹೆಸರು ಹೇಮಂತ್ ಅವರ ತಂದೆ ಮತ್ತು ಜೆಎಂಎಂ ಮುಖ್ಯಸ್ಥ ಶಿಬು ಸೊರೆನ್ ಹೆಸರೂ ಕೇಳಿ ಬರುತ್ತಿದೆ. ಈ ಹಿಂದೆಯೂ ಬಿಹಾರದಲ್ಲಿ ಇದೇ ರೀತಿಯ ಪ್ರಯೋಗ ನಡೆದಿದ್ದು, 1997ರಲ್ಲಿ ಅಂದಿನ ರಾಜ್ಯದ ಸಿಎಂ ಲಾಲು ಯಾದವ್ ಅವರು ತಮ್ಮ ವಿರುದ್ಧ ಮೇವು ಹಗರಣದಲ್ಲಿ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದ್ದ ಸಂದರ್ಭ ತಮ್ಮ ಪತ್ನಿ ರಾಬ್ರಿ ದೇವಿ ಅವರನ್ನು ಸಿಎಂ ಆಗಿ ನೇಮಿಸುವ ಮೂಲಕ ಎದುರಾಳಿಗಳಿಗೆ ತಿರುಗೇಟು ನೀಡಿದ್ದರು.
ಆದರೆ, ಈ ಸಂಬಂಧ ಚುನಾವಣಾ ಆಯೋಗ ಅಥವಾ ರಾಜ್ಯಪಾಲ ರಮೇಶ್ ಬೈಸ್ ಅವರಿಂದ ಮುಖ್ಯಮಂತ್ರಿ ಕಚೇರಿಗೆ ಯಾವುದೇ ಮಾಹಿತಿ ಬಂದಿಲ್ಲ. ಬಿಜೆಪಿ ನಾಯಕರ ಯಾರೋ ಕೈಗೊಂಬೆ ಪತ್ರಕರ್ತ ಇಸಿಐ ವರದಿ ತಯಾರಿಸಿರಬೇಕು ಎಂದು ತೋರುತ್ತದೆ. ಯಾಕೆಂದರೆ ಅದು ಮುಚ್ಚಿದ ಕವರ್ ವರದಿಯಾಗಿರುತ್ತದೆ. ಯಾರಿಗೂ ಸಿಗುವುದಿಲ್ಲ. ಇಲ್ಲವಾದರೆ ಬಿಜೆಪಿಯವರು ಸಾಂವಿಧಾನಿಕ ಅಧಿಕಾರಿಗಳು, ಸಾರ್ವಜನಿಕ ಸಂಸ್ಥೆಗಳು ಸ್ಪಷ್ಟ ದುರುಪಯೋಗಪಡಿಸಿಕೊಂಡಿರಬೇಕು ಎಂದು ಹೇಮಂತ್ ಸೊರೆನ್ ಟೀಕಿಸಿದ್ದಾರೆ.
ಬಿಹಾರದಂತೆಯೇ ಜಾರ್ಖಂಡ್‌ನಲ್ಲಿಯೂ ಏನಾದರೂ ಸಂಭವಿಸಿದರೆ ಜೆಎಂಎಂ ಸದಸ್ಯರು ಕಲ್ಪನಾ ಸೊರೆನ್ ಹೆಸರನ್ನು ಒಪ್ಪುತ್ತಾರೆಯೇ ಎಂಬುದು ಸದ್ಯ ಕುತೂಹಲಕಾರಿ ವಿಚಾರವಾಗಿದೆ.
ಇದನ್ನೂ ಓದಿ : ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರ ಚುನಾವಣೆ ಮತ್ತೆ ಮುಂದೂಡಿಕೆ