ನವದೆಹಲಿ: ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟಿದೆ. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರನ್ನು ಬೆಂಬಲಿಸಲು ಗುಂಪೊಂದು ರ‍್ಯಾಲಿಯನ್ನು ಆಯೋಜಿಸುತ್ತಿದೆ. ವರದಿಗಳ ಪ್ರಕಾರ ಕೆನಡಾದ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ನಡೆಯಲಿರುವ ಈ ರ‍್ಯಾಲಿಯ ನೇತೃತ್ವವನ್ನು ರಹತ್ ರಾವ್ ಎಂಬಾತ ವಹಿಸಿದ್ದಾನೆ. ಈತನನ್ನು ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ)ಗೆ ಹತ್ತಿರದ ವ್ಯಕ್ತಿ ಎಂದೇ ನಂಬಲಾಗಿದೆ.
ಮುಂದಿನ ವರ್ಷ ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿರುವುದರಿಂದ ನವದೆಹಲಿಯ ಮೇಲೆ ಅಂತಾರಾಷ್ಟ್ರೀಯ ಒತ್ತಡವನ್ನು ಹೆಚ್ಚಿಸಲು ಐಎಸ್‌ಐ ವಿದೇಶದಲ್ಲಿ ತನ್ನ ಎಲ್ಲ ಘಟಕಗಳನ್ನು ಪುನಃ ಸಕ್ರಿಯಗೊಳಿಸುತ್ತಿದೆ ಎಂದು ತಜ್ಞರು ಭಾವಿಸಿದ್ದಾರೆ. ಜೂನ್‌ನಲ್ಲಿ ಸರ್ರೆಯ ಗುರುದ್ವಾರದ ಪಾರ್ಕಿಂಗ್ ಸ್ಥಳದಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ನ ಹತ್ಯೆಗೈದ ಪ್ರಕರಣದಲ್ಲಿ ಭಾರತದ ಕೈವಾಡವಿದೆ ಎಂಬ ಪ್ರಧಾನಿ ಟ್ರುಡೊ ಆರೋಪದಿಂದ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಟ್ರುಡೊ ಬೆಂಬಲಿಸಿ ರ‍್ಯಾಲಿ ಆಯೋಜಿಸಲಾಗುತ್ತಿದೆ.
"ಇದು ಕೆ2ಕೆ (ಕಾಶ್ಮೀರದಿಂದ ಖಲಿಸ್ತಾನ್) ಯೋಜನೆಯು ಭಾರತವನ್ನು ವಿಘಟಿಸುವ ಐಎಸ್‌ಐನ ಕಾರ್ಯಸೂಚಿಯ ಪ್ರಮುಖ ಭಾಗವಾಗಿದೆ. ಐಎಸ್‌ಐ ಕೆನಡಾದಲ್ಲಿ ಸಂಪೂರ್ಣವಾಗಿ ತನ್ನ ಏಜೆಂಟ್ಗಳನ್ನು ರಚಿಸಿದೆ. ಖಲಿಸ್ತಾನ್ ಮತ್ತು ಕಾಶ್ಮೀರ ಸಮಸ್ಯೆಗಳು ಒಂದೇ ಎಂಬಂತೆ ಬಿಂಬಿಸಲಾಗುತ್ತದೆ'' ಎಂದು ಭೌಗೋಳಿಕ ರಾಜಕೀಯ ಮತ್ತು ಭದ್ರತಾ ವ್ಯವಹಾರಗಳ ಚಿಂತಕರ ಚಾವಡಿಯಾದ ಉಸಾನಸ್ ಫೌಂಡೇಶನ್‌ನ ಸಂಸ್ಥಾಪಕ ಮತ್ತು ಸಿಇಒ ಅಭಿನವ್ ಪಾಂಡೆ 'ಈಟಿವಿ ಭಾರತ್'ಗೆ ತಿಳಿಸಿದ್ದಾರೆ.
''ಕೆನಡಾದಲ್ಲಿ ಪಾಕಿಸ್ತಾನವು ಈಗಾಗಲೇ ಸರ್ಕಾರಿ ಯಂತ್ರಗಳಲ್ಲಿ ಆಳವಾದ ಬೇರೂರಿದೆ'' ಎಂದ ಅವರು, ಇದನ್ನು ಪುಷ್ಟಿಕರಿಸಲು 2020ರಲ್ಲಿ ಕೆನಡಾದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಬಲೂಚ್ ಮಾನವ ಹಕ್ಕುಗಳ ಕಾರ್ಯಕರ್ತೆ ಕರೀಮಾ ಬಲೂಚ್ ಪ್ರಕರಣವನ್ನು ಉಲ್ಲೇಖಿಸಿದರು. ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಅಸಹಕಾರದ ಧ್ವನಿಗೆ ಕರೀಮಾ ಹೆಸರುವಾಸಿಯಾಗಿದ್ದರು. 2022ರ ಡಿಸೆಂಬರ್ 20ರಂದು ಜೀವಂತವಾಗಿ ಕಾಣಿಸಿಕೊಂಡಿದ್ದ ಕರೀಮಾ ಮೃತದೇಹವು, ಎರಡು ದಿನಗಳ ನಂತರ ಅಂದರೆ ಡಿಸೆಂಬರ್ 22ರಂದು ಟೊರೊಂಟೊ ಸರೋವರದ ತೀರದಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಟೊರೊಂಟೊ ಪೊಲೀಸರು ಹೆಚ್ಚಿನ ವಿವರಗಳನ್ನು ನೀಡಿರಲಿಲ್ಲ. ಕರೀಮಾ ಬಲೂಚ್ ಸಾವಿನ ಹಿಂದೆ ಐಎಸ್‌ಐ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.
ಕರೀಮಾ ಬಲೂಚ್ ಸಾವಿನ ತನಿಖೆಗೆ ಒತ್ತಾಯಿಸಿ ಬಲೂಚಿಸ್ತಾನ ಮತ್ತು ಕೆನಡಾದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಕೆನಡಾದ ಬಲೂಚ್, ಪಶ್ತೂನ್ ಮತ್ತು ಸಿಂಧಿ ಜನಾಂಗೀಯ ಅಲ್ಪಸಂಖ್ಯಾತ ಗುಂಪುಗಳು ಜಂಟಿ ಹೇಳಿಕೆ ನೀಡಿದ್ದವು. ಈ ಸಾವಿನ ಹಿಂದೆ ಪಿತೂರಿ ಇರುವ ಬಗ್ಗೆ ಯಾವುದೇ ಪುರಾವೆಗಳು ಇಲ್ಲ ಎಂದು ಪೊಲೀಸರು ಹೇಳಿದ್ದರು. ಆದರೆ, ಐಎಸ್‌ಐ ಕೈವಾಡದ ಶಂಕೆ ಇನ್ನೂ ಹಾಗೆ ಇದೆ.
''ಈಗ ಜೂನ್‌ನಲ್ಲಿ ಹತ್ಯೆಯಾದ ನಿಷೇಧಿತ ಸಿಖ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ಎಂಬ ಖಲಿಸ್ತಾನಿ ಸಂಘಟನೆಯ ನಾಯಕ ಗುರುಪತ್‌ವಂತ್ ಸಿಂಗ್ ಪನ್ನು ಐಎಸ್‌ಐಗೆ ನಿಕಟವಾಗಿದ್ದರು'' ಎಂದು ಅಭಿನವ್ ಪಾಂಡೆ ಹೇಳಿದ್ದಾರೆ. ''ಭಾರತದಲ್ಲಿ ಚುನಾವಣೆಗೆ ಮುಂಚಿತವಾಗಿ ಪಾಕಿಸ್ತಾನವು ಖಲಿಸ್ತಾನಿ ಪ್ರತ್ಯೇಕತಾವಾದಿಗಳಿಗೆ ಸಕ್ರಿಯವಾಗಿ ನಿಧಿಯನ್ನು ಆಯೋಜಿಸುತ್ತಿದೆ. ಜಮ್ಮು ಪ್ರದೇಶದಲ್ಲಿ ಗಡಿಯಾಚೆಗಿನ ಒಳನುಸುಳುವಿಕೆಗೆ ಹೊಸ ತಂತ್ರ ಅನುಸರಿಸುತ್ತಿದ್ದಾರೆ. ಭಾರತದಲ್ಲಿ ಈಗ ನಿರ್ಮೂಲನೆಯಾಗಿರುವ ಖಲಿಸ್ತಾನ್ ಸಮಸ್ಯೆಯನ್ನು ಪುನರುಜ್ಜೀವನಗೊಳಿಸಲು ಪಂಜಾಬ್‌ನಲ್ಲಿ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದಾರೆ'' ಎಂದು ವಿವರಿಸಿದ್ದಾರೆ.
ಹೀಗಾಗಿ, ''ಸರ್ರೆಯಲ್ಲಿನ ರ‍್ಯಾಲಿಯ ಹಿಂದೆ ಐಎಸ್‌ಐ ಕೈವಾಡ ಇರುವುದರ ಬಗ್ಗೆ ಅಚ್ಚರಿಯೇನಲ್ಲ. ಸಾರ್ವಜನಿಕ ಚುನಾವಣೆಗಳಿಗೆ ಮುಂಚಿತವಾಗಿ ಭಾರತದ ಮೇಲೆ ಅಂತಾರಾಷ್ಟ್ರೀಯ ರಾಜತಾಂತ್ರಿಕ ಮತ್ತು ನಾಗರಿಕ ಸಮಾಜದ ಒತ್ತಡವನ್ನು ಹೆಚ್ಚಿಸಲು ಎಲ್ಲ ರೀತಿಯ ಕುತಂತ್ರಗಳನ್ನು ಆಶ್ರಯಿಸಲಾಗುತ್ತಿದೆ. ಭಾರತದಲ್ಲಿ ಉಗ್ರವಾದ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ತೀವ್ರಗೊಳಿಸಲಾಗುತ್ತಿದೆ. ಭಾರತದಲ್ಲಿ ಕೋಮು ಭಾವೋದ್ರೇಕ ಮತ್ತು ಗಲಭೆಗಳನ್ನು ಪ್ರಚೋದಿಸಲು ಪ್ರಯತ್ನಿಸಲಾಗುತ್ತಿದೆ. ಮಣಿಪುರದ ಪರಿಸ್ಥಿತಿ ಸೇರಿದಂತೆ ಭಾರತದಲ್ಲಿನ ಎಲ್ಲ ತಪ್ಪು ನಡೆಗಳನ್ನು ಬಳಸಿಕೊಳ್ಳಲು ಯತ್ನಿಸಲಾಗುತ್ತಿದೆ'' ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಖಲಿಸ್ತಾನಿ ಉಗ್ರನ ಹತ್ಯೆ ಆರೋಪ: ರಾಜತಾಂತ್ರಿಕ ಅಧಿಕಾರಿ ಉಚ್ಚಾಟನೆ ಬಳಿಕ, ಕೆನಡಿಯನ್ನರಿಗೆ ವೀಸಾ ಸೇವೆ ನಿಲ್ಲಿಸಿದ ಭಾರತ