ರಾಂಚಿ (ಜಾರ್ಖಂಡ್) : ಒಂದೊಮ್ಮೆ ಕಾನ್ಸ್ಟೇಬಲ್ ಆಗಿದ್ದ ಹಾಗೂ ಸದ್ಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಧಾಡಸಿ ಮಹಿಳಾ ಅಥ್ಲೀಟ್ಗಳಿಗೆ ಜಾರ್ಖಂಡ್ ಸರ್ಕಾರ ಶೀಘ್ರದಲ್ಲೇ ಐಪಿಎಸ್ ಅಧಿಕಾರಿಯಾಗಿ ಬಡ್ತಿ ನೀಡಲಿದೆ. ಜೂನ್ 19 ರಂದು ದೆಹಲಿಯ ಯುಪಿಎಸ್‌ಸಿಯಲ್ಲಿ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ, ಜಾರ್ಖಂಡ್‌ನ ರಾಜ್ಯ ಪೊಲೀಸ್ ಸೇವೆಯ 24 ಅಧಿಕಾರಿಗಳಿಗೆ ಐಪಿಎಸ್‌ಗೆ ಬಡ್ತಿ ನೀಡಲು ಒಪ್ಪಿಗೆ ನೀಡಲಾಗಿದೆ. ಈ ಪೈಕಿ ಇಬ್ಬರು ಮಹಿಳಾ ಅಥ್ಲೀಟ್‌ಗಳಾದ ಸರೋಜಿನಿ ಲಕ್ಡಾ ಮತ್ತು ಎಮೆಲ್ಡಾ ಎಕ್ಕಾ ಅವರ ಹೆಸರು ಬಡ್ತಿ ಪಡೆಯುವ ಅಧಿಕಾರಿಗಳ ಆದ್ಯತೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಇಬ್ಬರೂ 1986 ರಲ್ಲಿ ಕ್ರೀಡಾ ಕೋಟಾದಿಂದ ರಾಜ್ಯ ಪೊಲೀಸ್‌ಗೆ ಕಾನ್ಸ್ಟೇಬಲ್ಗಳಾಗಿ ನೇಮಕಗೊಂಡಿದ್ದಾರೆ. ಕ್ರೀಡಾ ಮೈದಾನದಿಂದ ಪೊಲೀಸ್ ಸೇವೆಗೆ ಬಂದ ನಂತರ ತಮ್ಮನ್ನು ತಾವು ಸುಧಾರಿಸಿಕೊಂಡು ಉನ್ನತ ಶಿಕ್ಷಣ ಪಡೆದ ಈ ಇಬ್ಬರೂ ಕ್ರೀಡಾಪಟುಗಳು ಇಲಾಖೆ, ರಾಜ್ಯ ಹಾಗೂ ದೇಶವೇ ಹೆಮ್ಮೆ ಪಡುವಂಥ ಕೆಲಸ ಮಾಡಿದ್ದಾರೆ.
ಸರೋಜಿನಿ ಲಕ್ಡಾ ಅವರು ರಾಜ್ಯದ ಲತೇಹರ್ ಜಿಲ್ಲೆಯ ಗರು ಬ್ಲಾಕ್‌ನ ರಾಮ್ಸೆಲಿ ಗ್ರಾಮದವರಾಗಿದ್ದಾರೆ. ಬಾಲ್ಯದಿಂದಲೂ ಕ್ರೀಡೆಗಳಲ್ಲಿ ಜಾಸ್ತಿ ಒಲವು ಹೊಂದಿದ್ದರು. ಸರೋಜಿನಿಯವರ ಟ್ರ್ಯಾಕ್ ಮತ್ತು ಫೀಲ್ಡ್ ಪಯಣವು 1984 ರಲ್ಲಿ ಮಹುವದಂಡದ ಸಂತ ತೆರೇಸಾ ಶಾಲೆಯ ಅಥ್ಲೆಟಿಕ್ಸ್ ಸೆಂಟರ್‌ನ ವಿದ್ಯಾರ್ಥಿಯಾಗಿದ್ದಾಗ ಪ್ರಾರಂಭವಾಯಿತು. ಈ ವರ್ಷ ದೆಹಲಿಯಲ್ಲಿ ನಡೆದ ಎಸ್‌ಜಿಎಫ್‌ಐ ಕ್ರೀಡಾಕೂಟದಲ್ಲಿ ಅವರು ಜಾವೆಲಿನ್ ಎಸೆತದಲ್ಲಿ ತಮ್ಮ ಜೀವನದ ಮೊದಲ ಪದಕ ಗೆದ್ದರು.
ಆಲ್ ರೌಂಡರ್ ಅಥ್ಲೀಟ್ ಆಗಿರುವ ಅವರು 100 ಮೀ ಹರ್ಡಲ್ಸ್, 100 ಮತ್ತು 400 ಮೀ ರಿಲೇ, ಎತ್ತರ ಜಿಗಿತ, ಲಾಂಗ್ ಜಂಪ್, ಹೆಪ್ಟಾಥ್ಲಾನ್‌ನಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹತ್ತಾರು ಪದಕಗಳನ್ನು ಗೆದ್ದಿದ್ದಾರೆ. ಅವರು 1994 ರ ವರೆಗೆ ಭಾರತ ಪೊಲೀಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಆಗಿನ ಬಿಹಾರ ಸರ್ಕಾರವು 1986 ರಲ್ಲಿ ಅವರಿಗೆ ಕಾನ್ಸ್ಟೇಬಲ್ ಹುದ್ದೆಯನ್ನು ನೀಡಿತು. ಏತನ್ಮಧ್ಯೆ ಅವರ ಶಿಕ್ಷಣದ ಪಯಣ ಕ್ರೀಡೆ, ಉದ್ಯೋಗದೊಂದಿಗೆ ಮುಂದುವರೆಯಿತು. 2018 ರಲ್ಲಿ ಜರ್ಮನಿಯಿಂದ ಒಲಿಂಪಿಕ್ ಅಧ್ಯಯನದಲ್ಲಿ ಎಂಎ ಪೂರ್ಣಗೊಳಿಸಿದರು.
ಅದೇ ರೀತಿ, ಮಹುವದಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಚೈನ್‌ಪುರದ ಎಮೆಲ್ಡಾ ಎಕ್ಕಾ ಅವರು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬಿಹಾರ ರಾಜ್ಯವನ್ನು ಪ್ರತಿನಿಧಿಸಿದ್ದರು ಮತ್ತು 100, 200 ಮತ್ತು 400 ಮೀಟರ್ ಮತ್ತು ರಿಲೇ ಓಟದಲ್ಲಿ ರಾಜ್ಯ ಮಟ್ಟದಲ್ಲಿ ಅನೇಕ ದಾಖಲೆಗಳನ್ನು ಮಾಡಿದರು. ಎಮೆಲ್ಡಾ ಅಥ್ಲೀಟ್ ಆಗಿ ತಮ್ಮ ಪ್ರಯಾಣ ಆರಂಭಿಸಿದಾಗ ಅವರ ಬಳಿ ಹಾಕಿಕೊಳ್ಳಲು ಶೂ ಕೂಡ ಇರಲಿಲ್ಲ. 1991 ರಲ್ಲಿ ಇಬ್ಬರೂ ಒಟ್ಟಿಗೆ ಇನ್ಸ್ಪೆಕ್ಟರ್ ಆದರು. 2008ರಲ್ಲಿ ಇಬ್ಬರೂ ಡಿಎಸ್‌ಪಿ ಹುದ್ದೆಗೆ ಬಡ್ತಿ ಪಡೆದು 2019ರಲ್ಲಿ ಎಎಸ್‌ಪಿ ಹುದ್ದೆಗೇರಿದ್ದರು.
ಇದನ್ನೂ ಓದಿ : RBI Governor: ಆರ್ಬಿಐ ಡೆಪ್ಯೂಟಿ ಗವರ್ನರ್ ಆಗಿ ಸ್ವಾಮಿನಾಥನ್ ಜಾನಕಿರಾಮನ್ ನೇಮಕ