ಪಟಿಯಾಲ್( ಪಂಜಾಬ್): ಪಟಿಯಾಲದಲ್ಲಿ ಸಿಖ್ ಸಂಘಟನೆಗಳು ಮತ್ತು ಶಿವಸೇನೆ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಸಂಘರ್ಷ ಹತೋಟಿಗೆ ತರಲು ಸಂಪೂರ್ಣ ಸನ್ನದ್ಧವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಅದೇ ಸಮಯದಲ್ಲಿ ಪಟಿಯಾಲಾದಲ್ಲಿ ಬೆಳಗ್ಗೆ 9:30 ರಿಂದ ಸಂಜೆ 6 ರವರೆಗೆ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಭದ್ರತಾ ಕಾರಣಗಳಿಗಾಗಿ ಆಡಳಿತ ಈ ಕ್ರಮ ಕೈಗೊಂಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದೇ ವೇಳೆ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಸ್‌ಎಸ್‌ಪಿ ಪಟಿಯಾಲ ಡಾ. ನಾನಕ್ ಸಿಂಗ್ ಅವರು ವದಂತಿಗಳ ಬಗ್ಗೆ ಎಚ್ಚರದಿಂದಿರಿ ಎಂದು ಜನರಿಗೆ ಮನವಿ ಪೂರ್ವಕ ಸೂಚನೆ ನೀಡಿದ್ದಾರೆ. ಆಡಳಿತವು ನಿಮಗೆ ಯಾವುದೇ ಮಾಹಿತಿ ನೀಡಿದರೂ ಅದನ್ನು ಸ್ವೀಕರಿಸಬೇಕು ಮತ್ತು ವದಂತಿಗಳನ್ನು ನಂಬಬಾರದು ಎಂದು ಮನವಿ ಮಾಡಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡಲು ಏಪ್ರಿಲ್ 30 ರಂದು ಬೆಳಗ್ಗೆ 9:30 ರಿಂದ ಸಂಜೆ 6 ಗಂಟೆಯವರೆಗೆ ಮೊಬೈಲ್ ಇಂಟರ್ನೆಟ್ ಸೇವೆ ನಿರ್ಬಂಧಿಸಲಾಗಿದೆ ಎಂದು ಪಟಿಯಾಲ ಡಿಸಿ ಟ್ವೀಟ್ ಮಾಡಿದ್ದು, ಗಾಬರಿ ಪಡುವ ಅಗತ್ಯವಿಲ್ಲ, ವದಂತಿಗಳು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಗೃಹ ಇಲಾಖೆ ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಈ ನಡುವೆ ಡಿಸಿ ಪಟಿಯಾಲ ಸಾಕ್ಷಿ ಸಾಹ್ನಿ ಕಾಳಿದೇವಿ ದೇವಸ್ಥಾನದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ನಿನ್ನೆ ನಡೆದ ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಹರೀಶ್ ಸಿಂಗ್ಲಾನನ್ನು ಬಂಧಿಸಲಾಗಿದ್ದು, ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿ ಮಾಹಿತಿ ನೀಡಿದ್ದಾರೆ.
ಏನಿದು ಘಟನೆ?: ನಿನ್ನೆ ಖಲಿಸ್ತಾನ್ ಮುರ್ದಾಬಾದ್ ಮೆರವಣಿಗೆ ನಡೆಸಲು ಶಿವಸೇನೆ ಬೆಂಬಲಿಗರು ನಿರ್ಧರಿಸಿದ್ದರು. ಇದೇ ಕಾರಣಕ್ಕಾಗಿ ಸಿಖ್ ಸಂಘಟನೆಗಳು ಮತ್ತು ಶಿವಸೇನೆ ಬೆಂಬಲಿಗರ ನಡುವೆ ಘರ್ಷಣೆ ಸಂಭವಿಸಿತ್ತು. ಈ ಸಂದರ್ಭದಲ್ಲಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿ ನಿಯಂತ್ರಿಸಲು ಶ್ರಮಿಸಬೇಕಾಯಿತು.
ಜಿಲ್ಲೆಯಲ್ಲಿ ಕರ್ಫ್ಯೂ ಘೋಷಿಸಿದ ಡಿಸಿ: ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಡಿಸಿ ಸಾಕ್ಷಿ ಸಾಹ್ನಿ, ಶುಕ್ರವಾರ ಸಂಜೆ 7 ರಿಂದ ಶನಿವಾರ ಬೆಳಗ್ಗೆ 6:30 ರವರೆಗೆ ಇಡೀ ಪಟಿಯಾಲಾ ಜಿಲ್ಲೆಯಲ್ಲಿ ಕರ್ಫ್ಯೂ ವಿಧಿಸಿದ್ದರು. ವಿವಿಧ ಹಿಂದೂ ಸಂಘಟನೆಗಳು ಪಟಿಯಾಲಾ ಬಂದ್ಗೆ ಕರೆೆ ನೀಡಿವೆ.
ಹಿರಿಯ ಅಧಿಕಾರಿಗಳ ಎತ್ತಂಗಡಿ: ಘರ್ಷಣೆ ಹಿನ್ನೆಲೆಯಲ್ಲಿ ಪಟಿಯಾಲ ವಿಭಾಗದ ಐಜಿಪಿ, ಪಟಿಯಾಲ್ ಸಿನಿಯರ್ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಅವರನ್ನು ಸಿಎಂ ಭಗವಂತ್ ಮಾನ್ ವರ್ಗಾವಣೆ ಮಾಡಿ ಆದೇಶಿಸಿದ್ದಾರೆ.
ಇದನ್ನು ಓದಿ:ಸ್ನಾನ ಮಾಡುವಾಗ ಮೂವರು ಬಾಲಕಿಯರು ನೀರುಪಾಲು: ಎರಡು ಮೃತದೇಹಗಳು ಹೊರಕ್ಕೆ