ಮುಂಬೈ (ಮಹಾರಾಷ್ಟ್ರ): ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರ ಸಮ್ಮುಖದಲ್ಲಿ ಇಂದು ಭಾರತೀಯ ನೌಕಾಪಡೆಗೆ P75 (ಪ್ರಾಜೆಕ್ಟ್ 75)ನ ನಾಲ್ಕನೇ ಸ್ಕಾರ್ಪೀನ್-ಕ್ಲಾಸ್ ಜಲಾಂತರ್ಗಾಮಿ ನೌಕೆ 'ಐಎನ್‌ಎಸ್ ವೇಲಾ' ಸೇರ್ಪಡೆಯಾಗಿದೆ.
ಮುಂಬೈನ ನೌಕಾನೆಲೆಯಲ್ಲಿ ಐಎನ್‌ಎಸ್ ವೇಲಾಗೆ ಚಾಲನೆ ನೀಡಲಾಗಿದ್ದು, ಇದು ಸಂಪೂರ್ಣ ಜಲಾಂತರ್ಗಾಮಿ ಕಾರ್ಯಾಚರಣೆಗಳನ್ನು ಕೈಗೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇಂದಿನ ಕ್ರಿಯಾತ್ಮಕ ಮತ್ತು ಸಂಕೀರ್ಣ ಭದ್ರತಾ ಪರಿಸ್ಥಿತಿಗೆ ಅನುಗುಣವಾಗಿ ಭಾರತದ ಕಡಲ ಹಿತಾಸಕ್ತಿಗಳನ್ನು ರಕ್ಷಿಸಲು ನೌಕಾಪಡೆಯ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಅಡ್ಮಿರಲ್ ಕರಂಬೀರ್ ಸಿಂಗ್ ಹೇಳಿದರು.
ಈ ಜಲಾಂತರ್ಗಾಮಿ ನೌಕೆಯನ್ನು ಮುಂಬೈ ಮೂಲದ ಮಜಗಾಂವ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್ ಕಂಪನಿಯು ಫ್ರಾನ್ಸ್‌ನ ಮೆಸ್ಸರ್ ನೇವಲ್ ಗ್ರೂಪ್‌ನ ಸಹಯೋಗದೊಂದಿಗೆ ನಿರ್ಮಿಸಿದೆ. 1973ರ ಆಗಸ್ಟ್ 31 ರಂದೇ 'ವೇಲಾ' ಹೆಸರಿನ ಈ ನೌಕೆ ಕಾರ್ಯಾಚರಣೆ ಆರಂಭಿಸಿ 37 ವರ್ಷಗಳ ಕಾಲ ಅದ್ಭುತ ಸೇವೆ ನೀಡಿತ್ತು. 2010ರ ಜೂನ್ 25ರಂದು ಇದರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ 2019ರ ಮೇ 6 ರಂದು ಮತ್ತೆ 'ಐಎನ್‌ಎಸ್ ವೇಲಾ' ಎಂದು ಲೋಕಾರ್ಪಣೆ ಮಾಡಲಾಗಿತ್ತು.
ಇದನ್ನೂ ಓದಿ: ಐಎನ್‌ಎಸ್ ವಿಶಾಖಪಟ್ಟಣಂ ಸೇರ್ಪಡೆ: ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ
ನವೆಂಬರ್ 21 ರಂದು ಸ್ವದೇಶಿ ನಿರ್ಮಿತ ಕ್ಷಿಪಣಿ ಉಡ್ಡಯನ ಹಾಗೂ ಧ್ವಂಸ ಮಾಡಬಲ್ಲ, ಅತ್ಯಾಧುನಿಕ ಯುದ್ಧ ಸಾಮರ್ಥ್ಯವುಳ್ಳ 'ಐಎನ್‌ಎಸ್ ವಿಶಾಖಪಟ್ಟಣಂ' ನೌಕೆಯನ್ನು ಲೋಕಾರ್ಪಣೆ ಮಾಡಲಾಗಿತ್ತು.