ಖಮ್ಮಂ (ತೆಲಂಗಾಣ): ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ನಡೆದ ಲಿಫ್ಟ್ ನೀಡಿದ ಬೈಕ್ ಸವಾರನಿಗೆ ವಿಷದ ಇಂಜೆಕ್ಷನ್ ಚುಚ್ಚಿ ಕೊಲೆ ಪ್ರಕರಣಕ್ಕೆ ಭಾರಿ ತಿರುವು ಸಿಕ್ಕಿದೆ. ವಿವಾಹೇತರ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಾರೆ ಎಂಬ ಕಾರಣಕ್ಕೆ ಪತ್ನಿಯೇ ಕೊಲೆ ಮಾಡಿಸಿರುವ ಆಘಾತಕಾರಿ ಮಾಹಿತಿ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಆರೋಪಿ ಪತ್ನಿ ಸೇರಿ ನಾಲ್ವರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಇಲ್ಲಿನ ಮುದಿಗೊಂಡ ಮಂಡಲದ ವಲ್ಲಭಿ ಗ್ರಾಮದ ಬಳಿ ಇತ್ತೀಚೆಗೆ ಬೊಪ್ಪರಂ ಗ್ರಾಮದ ಜಮಾಲ್ ಸಾಹೇಬ್ ಎಂಬಾತನಿಗೆ ವಿಷದ ಇಂಜೆಕ್ಷನ್ ಚುಚ್ಚಿ ಕೊಲೆ ಮಾಡಲಾಗಿತ್ತು. ಜಮಾಲ್ ಸಾಹೇಬ್ ಬೈಕ್ನಲ್ಲಿ ಹೋಗುತ್ತಿದ್ದಾಗ ವ್ಯಕ್ತಿಯೋರ್ವ ಲಿಫ್ಟ್ ಪಡೆದು ವಿಷದ ಇಂಜೆಕ್ಷನ್ ಚುಚ್ಚಿ ಪರಾರಿಯಾಗಿದ್ದರು. ಇದರಿಂದ ಸ್ವಲ್ಪ ದೂರ ಹೋದ ನಂತರ ಬೈಕ್ ಮೇಲಿಂದ ಜಮಾಲ್ ಸಾಹೇಬ್ ಕೆಳಗೆ ಬಿದ್ದಿದ್ದರು. ಇದನ್ನು ಕಂಡ ಸ್ಥಳೀಯರು ಅವರನ್ನು ಮುದಿಗೊಂಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಜಮಾಲ್ ಮೃತಪಟ್ಟಿದ್ದರು.
ಇದನ್ನೂ ಓದಿ: ಲಿಫ್ಟ್ ಬೇಕೆಂದು ಬೈಕ್ ಹತ್ತಿದವ ವಿಷದ ಇಂಜೆಕ್ಷನ್ ಚುಚ್ಚಿ ಪರಾರಿ
ಬೈಕ್ನಲ್ಲಿ ಮಗಳ ಮನೆಗೆ ಹೋಗುತ್ತಿದ್ದ ಜಮಾಲ್ ಸಾಹೇಬ್ ಅವರನ್ನು ಸಾಯಿಸುವ ಮುನ್ನ ತನ್ನ ಬೈಕ್ನಲ್ಲಿ ಲಿಫ್ಟ್ ಪಡೆದ ವ್ಯಕ್ತಿ ಇಂಜೆಕ್ಷನ್ವೊಂದು ಚುಚ್ಚಿದ್ದಾರೆ ಎಂಬುದನ್ನು ಹೇಳಿದ್ದರು. ಹೀಗಾಗಿಯೇ ಈ ಘಟನೆ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಅಲ್ಲದೇ, ಇದನ್ನು ಗಂಭೀರವಾಗಿ ಪರಿಗಣಿಸಿದ ಖಮ್ಮಂ ಪೊಲೀಸರು, ಆರೋಪಿ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದರು. ಮೊದಲಿಗೆ ಜಮಾಲ್ ಸಾಹೇಬ್ ಕುಟುಂಬಸ್ಥರ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.
ಫೋನ್ ಕಾಲ್ನಿಂದ ಸಿಕ್ಕಿಬಿದ್ದ ಪತ್ನಿ: ಅಂತೆಯೇ, ಪೊಲೀಸರು ತಮ್ಮ ತನಿಖೆಯ ಭಾಗವಾಗಿ ಫೋನ್ ಕಾಲ್ ಲಿಸ್ಟ್ಗಳನ್ನು ಪರಿಶೀಲನೆ ಮಾಡಿದ್ದಾರೆ. ಇದರಲ್ಲಿ ಅನೇಕ ಬಾರಿ ಫೋನ್ ನಲ್ಲಿ ಮಾತನಾಡಿದ ವ್ಯಕ್ತಿಗಳನ್ನು ಪತ್ತೆ ಹಚ್ಚಲಾಗಿದೆ.
ಈ ವೇಳೆ ಜಮಾಲ್ ಪತ್ನಿ ಇಮಾಂಬಿಯ ಫೋನ್ ಕಾಲ್ ಲಿಸ್ಟ್ನಲ್ಲಿ ಕೊಲೆ ಮಾಡಿದ ಆರೋಪಿಗಳ ಫೋನ್ ನಂಬರ್ಗಳಿದ್ದು, ಆಕೆ ಅವರೊಂದಿಗೆ ಹಲವು ಬಾರಿ ಮಾತನಾಡಿದ್ದಕ್ಕೆ ಸಾಕ್ಷಿ ಸಿಕ್ಕಿದೆ. ಆದ್ದರಿಂದ ಪೊಲೀಸರು ಪತ್ನಿ ಇಮಾಂಬಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಆರ್‌ಎಂಪಿ ವೈದ್ಯ ವೆಂಕಟ್, ಟ್ರ್ಯಾಕ್ಟರ್ ಚಾಲಕ ವೆಂಕಟೇಶ್ ಮತ್ತು ಮೋಹನ್ ರಾವ್ ಎಂಬುವರ ಹೆಸರನ್ನು ಪತ್ನಿ ಬಾಯ್ಬಿಟ್ಟಿದ್ದಾರೆ.
ಎರಡು ತಿಂಗಳ ಹಿಂದೆಯೇ ಪ್ಲಾನ್: ವಿವಾಹೇತರ ಸಂಬಂಧದಿಂದಾಗಿ ಈ ಕೊಲೆ ಮಾಡಿಸಲಾಗಿದೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಅಲ್ಲದೇ, ಇಮಾಂಬಿ ತನ್ನ ಪ್ರಿಯಕರನೊಂದಿಗೆ ಸೇರಿ ಎರಡು ತಿಂಗಳ ಹಿಂದೆಯೇ ಜಮಾಲ್ ಹತ್ಯೆಗೆ ಪ್ಲಾನ್ ಮಾಡಿದ್ದರು. ಇದರ ಭಾಗವಾಗಿ ಆರ್‌ಎಂಪಿ ವೈದ್ಯ ವೆಂಕಟ್ ನೆರವಿನಿಂದ ವಿಷ ಪ್ರಯೋಗ ನಡೆಸಲು ನಿರ್ಧರಿಸಿದ್ದರು.
ಈ ವಿಷದ ಇಂಜೆಕ್ಷನ್ಅನ್ನು ಮನೆಯಲ್ಲೇ ಗಂಡನಿಗೆ ಕೊಡಬೇಕೆಂದು ಯೋಜಿಸಲಾಗಿತ್ತು. ಆದರೆ, ಧೈರ್ಯ ಸಾಲದ ಕಾರಣ ಆ ಕೆಲಸವನ್ನು ತನ್ನ ಗೆಳೆಯನಿಗೆ ಪತ್ನಿ ಒಪ್ಪಿಸಿದರು. ಆದ್ದರಿಂದಲೇ ಮೋಹನ್ ರಾವ್, ವೆಂಕಟೇಶ್ ಮತ್ತು ವೆಂಕಟ್ ಮೂವರು ಸೇರಿಕೊಂಡು ಜಮಾಲ್ ಕೊಲೆಗೆ ಸಂಚು ರೂಪಿಸಿದ್ದರು. ಅಂತೆಯೇ, ಜಮಾಲ್ ತಮ್ಮ ಮಗಳ ಮನೆಗೆ ಬೈಕ್ನಲ್ಲಿ ಹೋಗುತ್ತಿದ್ದಾಗ ಲಿಫ್ಟ್ ನೆಪದಲ್ಲಿ ಆರ್‌ಎಂಪಿ ವೈದ್ಯನಾದ ವೆಂಕಟ್ ಬೈಕ್ ಏರಿ ಚುಚ್ಚುಮದ್ದು ನೀಡಿ ಪರಾರಿಯಾಗಿದ್ದರು ಎಂಬುದು ತನಿಖೆಯಲ್ಲಿ ಬಯಲಾಗಿದೆ.
ತಲೆಮರೆಸಿಕೊಂಡ ಇನ್ನಿಬ್ಬರು ಆರೋಪಿಗಳು: ಸದ್ಯ ಈ ಕೊಲೆ ಪ್ರಕರಣದಲ್ಲಿ ಮಾಸ್ಟರ್ ಮೈಂಡ್ ಇದ್ದಾನೆ ಎಂದು ಹೇಳಲಾಗುತ್ತಿದ್ದು, ಈ ಸೂತ್ರಧಾರ ಸೇರಿ ಒಟ್ಟಾರೆ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಈಗ ಸಿಕ್ಕಿರುವ ಸಾಕ್ಷ್ಯಾಧಾರಗಳ ಮೇಲೆ ಜಮಾಲ್ ಪತ್ನಿ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಮದುವೆಯಾಗಿ 15 ದಿನ: ಪತಿಗೆ ಕರೆಂಟ್ ಶಾಕ್ ಕೊಟ್ಟು ಕೊಂದ ಪತ್ನಿ.. ಕಾಲ್ ರೆಕಾರ್ಡಿಂಗ್ನಿಂದ ಸತ್ಯ ಬಹಿರಂಗ