ಪುಣೆ(ಮಹಾರಾಷ್ಟ್ರ): ಬಜಾಜ್ ಗ್ರೂಪ್‌ನ ಮಾಜಿ ಅಧ್ಯಕ್ಷ ಹಾಗೂ ಪದ್ಮಭೂಷಣ ಪುರಸ್ಕೃತ ರಾಹುಲ್ ಬಜಾಜ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಪುಣೆಯಲ್ಲಿರುವ ವೈಕುಂಠ ಸ್ಮಶಾನದಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ರಾಹುಲ್ ಬಜಾಜ್ ಅಂತ್ಯಕ್ರಿಯೆ ನಡೆಯಿತು. ರಾಹುಲ್ ಮಕ್ಕಳಾದ ರಾಜೀವ್ ಮತ್ತು ಸಂಜೀವ್ ತಮ್ಮ ಸಂಪ್ರದಾಯದಂತೆ ವಿಧಿ-ವಿಧಾನಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಿದರು.
ಇಂದು ಬೆಳಗ್ಗೆ ಅಕುರ್ಡಿಯಲ್ಲಿರುವ ನಿವಾಸದಲ್ಲಿ ರಾಹುಲ್ ಬಜಾಜ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ಆದಿತ್ಯ ಠಾಕ್ರೆ ಸೇರಿದಂತೆ ಅನೇಕರು ಆಗಮಿಸಿ ರಾಹುಲ್ ಅವರಿಗೆ ಗೌರವ ಸಲ್ಲಿಸಿದ್ದರು.
ಶನಿವಾರ ಪುಣೆಯ ರೂಬಿ ಹಾಲ್ ಆಸ್ಪತ್ರೆನಲ್ಲಿ ರಾಹುಲ್ ಬಜಾಜ್ ವಿಧಿವಶರಾಗಿದ್ದರು. ಇವರು ಕಳೆದೊಂದು ತಿಂಗಳಿನಿಂದ ಹೃದಯ ಮತ್ತು ಶ್ವಾಸಕೋಶ ಸಂಬಂಧಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು.
ಕಳೆದ 5 ದಶಕಗಳಲ್ಲಿ ಬಜಾಜ್ ಸಮೂಹವನ್ನು ಮುನ್ನಡೆಸುವಲ್ಲಿ ರಾಹುಲ್ ಬಜಾಜ್ ಪ್ರಮುಖ ಪಾತ್ರವಹಿಸಿದ್ದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ಅರ್ಥಶಾಸ್ತ್ರ ಮತ್ತು ಕಾನೂನಿನಲ್ಲಿ ಪದವಿ, ಹುವಾರ್ಡ್ ವಿಶ್ವವಿದ್ಯಾನಿಲಯದಿಂದ ಎಂಬಿಎ ಪದವಿ ಪಡೆದಿದ್ದ ಬಜಾಜ್, 2001ರಲ್ಲಿ ಭಾರತ ಸರ್ಕಾರದ ಪದ್ಮಭೂಷಣ ಪಡೆದಿದ್ದರು.
ಇದನ್ನೂ ಓದಿ: ಉದ್ಯಮಿ ರಾಹುಲ್ ಬಜಾಜ್ ಪಾರ್ಥಿವ ಶರೀರದ ಅಂತಿಮ ದರ್ಶನ; ಸಂಜೆ ವೇಳೆಗೆ ಅಂತ್ಯಸಂಸ್ಕಾರ