ಜೈಪುರ (ರಾಜಸ್ಥಾನ): ಭಾರತದ ಅತಿ ಹಿರಿಯ ಸಿಂಹಿಣಿ ‘ಶೇರ್ನಿ ಬೇಗಂ’ ಮೃತಪಟ್ಟಿದೆ. ಜೈಪುರದ ನಾಹರ್ಗಢದಲ್ಲಿರುವ ಆಶ್ರಯ ಕೇಂದ್ರದಲ್ಲಿದ್ದ ಸುಮಾರು 30 ವರ್ಷದ ಬೇಗಂ ಇಂದು ಮಧ್ಯಾಹ್ನ ಮೃತಪಟ್ಟಿದೆ. ಸಿಂಹಿಣಿಯದ್ದು ಸಹಜ ಸಾವು ಎಂದು ವೈದ್ಯಕೀಯ ವರದಿ ಬಂದ ಬಳಿಕ ಆಶ್ರಯ ಕೇಂದ್ರದಲ್ಲಿಯೇ ಅಂತ್ಯಕ್ರಿಯೆ ಮಾಡಲಾಯಿತು.
2005 ರಲ್ಲಿ ಅಂದರೆ ಶೇರ್ನಿ ಬೇಗಂಗೆ 15 ವರ್ಷ ವಯಸ್ಸಾಗಿದ್ದಾಗ ಜಾರ್ಖಂಡ್ನ ನಟರಾಜ ಸರ್ಕಸ್ನಿಂದ ಜೈಪುರಕ್ಕೆ ತರಲಾಯಿತು. ಸುಮಾರು 1 ವರ್ಷದ ಹಿಂದೆ ಬೇಗಂ ಪಾರ್ಶ್ವವಾಯುವಿಗೆ ತುತ್ತಾಗಿದ್ದು, ಹಿರಿಯ ಪಶು ವೈದ್ಯ ಡಾ. ಅರವಿಂದ್ ಮಾಥುರ್ ನೇತೃತ್ವದ ತಂಡ ಚಿಕಿತ್ಸೆ ನೀಡಿದ್ದರಿಂದ ಗುಣಮುಖವಾಯಿತು. ಬಳಿಕ ವಯೋಸಹಜ ಕಾಯಿಲೆಗಳು ಕಾಣಿಸಿಕೊಂಡವು. ಎಷ್ಟೇ ಚಿಕಿತ್ಸೆ ಕೊಡಿಸಿದರೂ ಚೇತರಿಕೆ ಕಂಡು ಬಂದಿರಲಿಲ್ಲ.
ಸಿಂಹಿಣಿಗೆ ವಯಸ್ಸಾಗಿದ್ದರಿಂದ ಬಾಯಿಯಲ್ಲಿ ಹಲ್ಲುಗಳಿರಲಿಲ್ಲ. ಯಾವ ಆಹಾರವನ್ನೂ ಸೇವಿಸಲಾಗ್ತಿರ್ಲಿಲ್ಲ. ಕೊಚ್ಚಿದ ಮಾಂಸ ತುಂಡುಗಳನ್ನು ಮಾತ್ರ ಸೇವಿಸುತ್ತಿತ್ತು ಎಂದು ಡಿಎಫ್ಓ ಉಪಕಾರ್ ಬೋರಾನಾ ತಿಳಿಸಿದ್ದಾರೆ.