ಕೊಲಂಬೋ(ಶ್ರೀಲಂಕಾ): ಕೋವಿಡ್ ಸೋಂಕಿನಿಂದ ಹಾವಳಿ ಕಡಿಮೆಯಾಗುತ್ತಿದ್ದು, ಈಗಷ್ಟೇ ಎಲ್ಲಾ ರಾಷ್ಟ್ರಗಳು ಚೇತರಿಕೆ ಕಾಣುತ್ತಿವೆ. ಈ ರಾಷ್ಟ್ರಗಳ ಪಟ್ಟಿಯಲ್ಲಿ ಶ್ರೀಲಂಕಾ ಕೂಡಾ ಇದ್ದು, ಅಲ್ಲಿಗೆ ಪ್ರವಾಸ ಹೊರಡುವವರ ಪಟ್ಟಿಯಲ್ಲಿ ಭಾರತೀಯರು ಅಗ್ರಸ್ಥಾನದಲ್ಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಕ್ಟೋಬರ್‌ನಲ್ಲಿ ಶ್ರೀಲಂಕಾಗೆ ಎಲ್ಲಾ ರಾಷ್ಟ್ರಗಳಿಂದ ಸುಮಾರು 22,771 ಮಂದಿ ಪ್ರವಾಸಿಗರು ಆಗಮಿಸಿದ್ದಾರೆ. ಏಪ್ರಿಲ್ ತಿಂಗಳ ನಂತರ ಕಡಿಮೆ ಪ್ರವಾಸಿಗರು ಆಗಮಿಸಿದ್ದು, ಅಕ್ಟೋಬರ್ ತಿಂಗಳಲ್ಲಿ ಪ್ರವಾಸಿಗರ ಸಂಖ್ಯೆ ಸುಧಾರಣೆ ಕಂಡಿದೆ. ವ್ಯಾಕ್ಸಿನೇಷನ್ನ ಹೆಚ್ಚು ಪ್ರಮಾಣದಲ್ಲಿ ಆಗುತ್ತಿರುವ ಕಾರಣದಿಂದ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ ಎಂದು ಶ್ರೀಲಂಕಾ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ ಹೇಳಿದೆ.
ಅಕ್ಟೋಬರ್ ತಿಂಗಳಲ್ಲಿ ಭಾರತ, ಯುಕೆ, ಪಾಕಿಸ್ತಾನ, ರಷ್ಯಾ ಮತ್ತು ಜರ್ಮನಿ ದೇಶಗಳಿಂದ ಅತಿ ಹೆಚ್ಚು ಮಂದಿ ಪ್ರವಾಸಿಗರು ಆಗಮಿಸಿದ್ದಾರೆ ಎಂದು ಶ್ರೀಲಂಕಾ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ ಸ್ಪಷ್ಟನೆ ನೀಡಿದೆ.
ಶ್ರೀಲಂಕಾಗೆ ಆಗಮಿಸಿದ ಒಟ್ಟು ಪ್ರವಾಸಿಗರಲ್ಲಿ ಶೇಕಡಾ 37ರಷ್ಟು ಮಂದಿ ಭಾರತೀಯರೇ ಆಗಿದ್ದಾರೆ. ಯುಕೆಯಿಂದ ಶೇಕಡಾ 10ರಷ್ಟು, ಪಾಕಿಸ್ತಾನದಿಂದ ಶೇಕಡಾ 9ರಷ್ಟು ಮಂದಿ ಪ್ರವಾಸಕ್ಕೆ ಆಗಮಿಸಿದ್ದಾರೆ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.
ಅಮೆರಿಕ, ಪಶ್ಚಿಮ, ಮಧ್ಯ ಮತ್ತು ಪೂರ್ವ ಯುರೋಪ್‌ನ ದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಪ್ರಯಾಣ ನಿರ್ಬಂಧ ತೆಗೆದುಹಾಕಿದರೆ ಪ್ರವಾಸೋದ್ಯಮ ಮತ್ತಷ್ಟು ಸುಧಾರಣೆಯಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ವರ್ಷದ ಆರಂಭದಿಂದ ಅಕ್ಟೋಬರ್ 31ರ ಹೊತ್ತಿಗೆ, ಒಟ್ಟು 60,695 ಪ್ರವಾಸಿಗರು ಶ್ರೀಲಂಕಾಕ್ಕೆ ಭೇಟಿ ನೀಡಿದ್ದಾರೆ. ಹಿಂದಿನ ವರ್ಷ ಜನವರಿಯಿಂದ ಮಾರ್ಚ್ 18ರವರೆಗೆ 5,07,311 ಪ್ರವಾಸಿಗರು ಶ್ರೀಲಂಕಾಗೆ ಭೇಟಿಯಾಗಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇಕಡಾ 88ರಷ್ಟು ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ.
ಇದನ್ನೂ ಓದಿ: ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಭೂಮಿ ಬಡವರಿಗೆ ದಾನ ಮಾಡಿದ ಪರೋಪಕಾರಿ