ಲೂಧಿಯಾನ್(ಪಂಜಾಬ್): 92 ವರ್ಷದ ಮಹಿಳೆ ರೀನಾ ಬರೋಬ್ಬರಿ 75 ವರ್ಷಗಳ ಬಳಿಕ ತಾಯ್ನಾಡು ಪಾಕಿಸ್ತಾನಕ್ಕೆ ತೆರಳಿದ್ದು, ತಮ್ಮ ಪೂರ್ವಜರ ಮನೆ ಹಾಗೂ ಕುಟುಂಬಸ್ಥರ ನೋಡಿ ಕುಣಿದು ಕುಪ್ಪಳಿಸಿದ್ದಾರೆ. ಭಾರತ-ಪಾಕಿಸ್ತಾನ ವಿಭಜನೆ ವೇಳೆ ಭಾರತಕ್ಕೆ ಬಂದಿದ್ದ ರೀನಾ ಮರಳಿ ತಾಯ್ನಾಡಿಗೆ ಹೋಗಿರಲಿಲ್ಲ.
1947ರಲ್ಲಿ ಉಭಯ ದೇಶಗಳು ವಿಭಜನೆಯಾದ ಬಳಿಕ ರೀನಾ ಕುಟುಂಬ ಭಾರತಕ್ಕೆ ಸ್ಥಳಾಂತರಗೊಂಡಿತ್ತು. ಈ ವೇಳೆ ರೀನಾ ಕೇವಲ 15 ವರ್ಷದವಳಾಗಿದ್ದಳು. ಈ ಹಿಂದೆ ಪಾಕಿಸ್ತಾನಕ್ಕೆ ಭೇಟಿ ನೀಡಲು ವೀಸಾಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಅವರಿಗೆ ಅನುಮತಿ ಸಿಕ್ಕಿರಲಿಲ್ಲ.ಇದೀಗ ಪಾಕಿಸ್ತಾನ ಹೈಕಮಿಷನ್ ಸೌಹಾರ್ದ ಸೂಚಕವಾಗಿ ಅವರಿಗೆ ಮೂರು ತಿಂಗಳ ವೀಸಾ ನೀಡಿದೆ. ಪಾಕಿಸ್ತಾನದ ರಾವಲ್ಪಿಂಡಿಯಲ್ಲಿರುವ ಅವರ ಪೂರ್ವಜನ ನಿವಾಸಕ್ಕೆ ರೀನಾ ಭೇಟಿ ನೀಡಿದ್ದು, ವಾಘಾ-ಅಟ್ಟಾರಿ ಗಡಿ ಮೂಲಕ ಪ್ರವಾಸ ಬೆಳೆಸಿದ್ದರು.
ರೀನಾ ಸದ್ಯ ಪುಣೆಯಲ್ಲಿ ವಾಸಮಾಡ್ತಿದ್ದು, 90 ವರ್ಷ ವಯಸ್ಸಾಗಿದೆ. ಇವರ ಪತಿ ಇಂದರ್ ಪ್ರಕಾಶ್ ವರ್ಮಾ ಬೆಂಗಳೂರಿನ ಕಂಪನಿಯಲ್ಲಿ ಕೆಲಸ ಮಾಡ್ತಿದ್ದರು. 2005ರಲ್ಲಿ ಅವರು ನಿಧನರಾಗಿದ್ದಾರೆ. ಇದೀಗ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾರೆ. ಪಾಕಿಸ್ತಾನದ ವಿದೇಶಾಂಗ ಸಚಿವೆ ಹಿನಾ ರಬ್ಬಾನಿ ಇದೀಗ ವೀಸಾ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ. ಎರಡು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣಗಳ ಮೂಲಕ ಅವರು ತಮ್ಮ ಅಳಲು ಹೇಳಿಕೊಂಡಿದ್ದರು. ಆದರೆ, ಕೋವಿಡ್ ಕಾರಣದಿಂದ ಅವರಿಗೆ ವೀಸಾ ನೀಡಲು ಸಾಧ್ಯವಾಗಿರಲಿಲ್ಲ.
ಇದನ್ನೂ ಓದಿರಿ: ನಾಪತ್ತೆಯಾದ ಮುದ್ದಿನ ಗಿಣಿ ಪತ್ತೆಗೆ ಮತ್ತೊಂದು ಗಿಣಿಯ ಮೊರೆ ಹೋದ ಮಾಲೀಕ
ಅದ್ಧೂರಿಯಾಗಿ ಸ್ವಾಗತ: ರೀನಾ ಪಾಕಿಸ್ತಾನದ ರಾವಲ್ಪಿಂಡಿ ತಲುಪುತ್ತಿದ್ದಂತೆ ಅದ್ಧೂರಿಯಾಗಿ ಸ್ವಾಗತ ಮಾಡಿಕೊಳ್ಳಲಾಗಿದೆ. ಬ್ಯಾಂಡ್, ವಾದ್ಯಗಳೊಂದಿಗೆ ಸ್ವಾಗತಿಸಲಾಗಿದ್ದು, ಈ ವೇಳೆ ಪೂರ್ವಜರ ಮನೆ ಹಾಗೂ ಸಂಬಂಧಿಕರ ನೋಡಿ ರೀನಾ ಡ್ಯಾನ್ಸ್ ಮಾಡಿದ್ದಾರೆ.