ನವದೆಹಲಿ: ಈ ಚಳಿಗಾಲದಲ್ಲಿ ದಟ್ಟವಾದ ಮಂಜಿನಿಂದಾಗಿ ರೈಲುಗಳ ಓಡಾಟದಲ್ಲಿ ಆಗುತ್ತಿರುವ ವಿಳಂಬ ಹಾಗೂ ಅಡಚಣೆ ತಪ್ಪಿಸಲು ಭಾರತೀಯ ರೈಲ್ವೆ ಇಲಾಖೆಯು, GPS ಆಧಾರಿತ 'ಫಾಗ್ ಪಾಸ್' ಎಂಬ ಹೊಸ ಸಾಧನ ಪರಿಚಯಿಸಿದೆ.
ಚಳಿಗಾಲದ ಮಂಜು ವಿಶೇಷವಾಗಿ ದೇಶದ ಉತ್ತರ ಭಾಗಗಳಲ್ಲಿ ರೈಲುಗಳ ಮೇಲೆ ಪರಿಣಾಮ ಬೀರುತ್ತವೆ. ಕೆಲವೊಂದು ಸಂದರ್ಭಗಳಲ್ಲಿ ರೈಲುಗಳು 18- 19 ಗಂಟೆಗಳು ವಿಳಂಬವಾಗಿ, ಜನರ ಕೋಪಕ್ಕೆ ತುತ್ತಾಗಿರುವ ಉದಾಹರಣೆಗಳೂ ಇವೆ. ಇದಕ್ಕೆ ಪರಿಹಾರವನ್ನು ಕಂಡು ಕೊಂಡಿರುವ ರೈಲ್ವೆ ಇಲಾಖೆಯು 19,742 ಫಾಗ್ ಪಾಸ್ ಸಾಧನಗಳನ್ನು ರೈಲುಗಳಲ್ಲಿ ಅಳವಡಿಸಿದೆ. ಈ ಸಾಧನಗಳನ್ನು ಹೆಚ್ಚಾಗಿ ಉತ್ತರ ಭಾರತದಲ್ಲಿ ಕಾರ್ಯನಿರ್ವಹಿಸುವ ರೈಲುಗಳಿಗೆ ಅಳವಡಿಸಲಾಗಿದೆ.
ಈ ಉಪಕ್ರಮವು ವಿಳಂಬ ಹಾಗೂ ಅಡಚಣೆಯನ್ನು ಕಡಿಮೆ ಮಾಡುವ ಮೂಲಕ ರೈಲು ಸೇವೆಗಳ ವಿಶ್ವಾಸಾರ್ಹತೆ ಸುಧಾರಿಸುವಲ್ಲಿ, ಮತ್ತು ಒಟ್ಟಾರೆ ಪ್ರಯಾಣಿಕರ ಸುರಕ್ಷತೆ ಹೆಚ್ಚಿಸುವಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಏನಿದು ಫಾಗ್ ಪಾಸ್?: ಫಾಗ್ ಪಾಸ್ ಎಂಬುದು ಜಿಪಿಎಸ್ ಆಧಾರಿತ ನ್ಯಾವಿಗೇಷನ್ ಸಾಧನವಾಗಿದ್ದು, ಲೋಕೋ ಪೈಲಟ್ಗೆ ದಟ್ಟವಾದ ಮಂಜಿನ ಪರಿಸ್ಥಿತಿಯಲ್ಲಿ ಲ್ಯಾಂಡ್ಮಾರ್ಕ್ಗಳ ಕುರಿತು ನೈಜ ಸಮಯದ ಮಾಹಿತಿಯನ್ನು ಒದಗಿಸುವ ಮೂಲಕ ನ್ಯಾವಿಗೇಟ್ ಮಾಡಲು ಸಹಾಯ ಮಾಡುತ್ತದೆ. ಈ ಸಾಧನ ಸಿಗ್ನಲ್ಗಳು, ಲೆವೆಲ್ ಕ್ರಾಸಿಂಗ್ ಗೇಟ್ಗಳು (ಮಾನವಸಹಿತ ಮತ್ತು ಮಾನವ ರಹಿತ), ಶಾಶ್ವತ ವೇಗದ ನಿರ್ಬಂಧಗಳು, ತಟಸ್ಥ ವಿಭಾಗಗಳು ಮುಂತಾದ ಲ್ಯಾಂಡ್ಮಾರ್ಕ್ಗಳ ಬಗ್ಗೆ ಲೋಕೋ ಪೈಲಟ್ಗಳಿಗೆ ನೈಜ - ಸಮಯದ ಮಾಹಿತಿ ಪ್ರದರ್ಶನ ಹಾಗೂ ಧ್ವನಿ ಮಾರ್ಗದರ್ಶನದ ಮೂಲಕ ಒದಗಿಸುತ್ತದೆ. ಈ ಸಾಧನವು ಮುಂದೆ ಬರುವಂತಹ ಮೂರು ಲ್ಯಾಂಡ್ಮಾರ್ಕ್ಗಳನ್ನು, ಅವುಗಳು 500 ಮೀಟರ್ ದೂರದಲ್ಲಿರುವಾಗಲೇ ಭೌಗೋಳಿಕ ಕ್ರಮದಲ್ಲಿ ಧ್ವನಿ ಸಂದೇಶದ ಮೂಲಕ ಪ್ರದರ್ಶಿಸುತ್ತದೆ.
ಉತ್ತರ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, "ಈ ಸಾಧನವೂ ಮಂಜಿನಿಂದಾಗಿ ಸ್ವಲ್ಪವೂ ಕಾಣದಂತಹ ಪರಿಸ್ಥಿತಿಯಲ್ಲೂ ಲ್ಯಾಂಡ್ಮಾರ್ಕ್ಗಳ ನಿಖರವಾದ ದೂರವನ್ನು ಇದು ತೋರಿಸುತ್ತದೆ. ಕಡಿಮೆ ಗೋಚರತೆಯ ಸಮಯದಲ್ಲಿ ಮುಂಬರುವ ಸಿಗ್ನಲ್ ಹಾಗೂ ದೂರದ ಮೀಟರ್ ಅನ್ನು ಧ್ವನಿ ಸಂದೇಶದ ಮೂಲಕ ತಿಳಿಸುತ್ತದೆ. ಫಾಗ್ ಪಾಸ್ನ ಕಾರ್ಯ ಸರಳವಾಗಿದ್ದರೂ ಪರಿಣಾಮಕಾರಿ ಆಗಿರುತ್ತದೆ. ರೈಲು ಹೊರಡುವ ಮೊದಲು ಈ ಸಾಧನವನ್ನು ಲೋಕೋ ಪೈಲಟ್ಗೆ ಒದಗಿಸಲಾಗುತ್ತದೆ. ಈ ಸಾಧನ ಆ್ಯಂಟೆನಾ ಹೊಂದಿದ್ದು, ಸಿಗ್ನಲ್ಗಳನ್ನು ಸೆರೆಹಿಡಿಯುತ್ತದೆ. ಜೊತೆಗೆ ಇದು ಸ್ವಯಂಚಾಲಿತ ಹಾಗೂ ಮಾನ್ಯುವಲ್ ಎರಡು ವಿಧಾನಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಸಿಗ್ನಲ್ ರೈಲು ಸಾಗುತ್ತಿರುವ ಮಾರ್ಗವನ್ನು ತೋರಿಸುತ್ತದೆ. ಒಂದು ವೇಳೆ, ಅದು ಕಾರ್ಯ ನಿರ್ವಹಿಸದಿದ್ದರೆ, ಅದನ್ನು ಮಾನ್ಯುವಲ್ ಮೋಡ್ಗೆ ಬದಲಾಯಿಸಬಹುದು." ಎಂದು ತಿಳಿಸಿದರು.
"ಪ್ರತಿ ವರ್ಷ ದಟ್ಟ ಮಂಜಿನಿಂದಾಗಿ ಹಲವಾರು ರೈಲುಗಳು ನಿಗದಿತ ಸಮಯಕ್ಕಿಂತ ತಡುವಾಗಿ ಸಂಚರಿಸುವುದು ಅಥವಾ ರದ್ದುಗೊಳ್ಳುತ್ತವೆ. ಅಂತಹ ಸಂದರ್ಭದಲ್ಲಿ ಫಾಗ್ ಪಾಸ್ ಸಾಧನ ರೈಲು ಕಾರ್ಯಾಚರಣೆ ಸುಧಾರಿಸಲು ಸಹಾಯ ಮಾಡುತ್ತದೆ. ಆದರೆ ದಟ್ಟವಾದ ಮಂಜಿನ ಪರಿಸ್ಥಿತಿಯನ್ನು ನಿಭಾಯಿಸಲು ಇದು ಸಂಪೂರ್ಣ ಪರಿಹಾರವಲ್ಲ. ಯಾಕೆಂದರೆ ಈ ಸಾಧನ ಲೋಕೋ ಪೈಲಟ್ಗೆ ಯಾವುದೇ ಹೆಚ್ಚುವರಿ ಚಿತ್ರಣವನ್ನು ನೀಡುವುದಿಲ್ಲ." ಎಂದು ಅವರು ತಿಳಿಸಿದರು.
ಒಟ್ಟು 19742 ಫಾಗ್ ಪಾಸ್ ಸಾಧನಗಳನ್ನು ರೈಲ್ವೆ ಇಲಾಖೆ ಪರಿಚಯಿಸಿದೆ. ಅವುಗಳಲ್ಲಿ ಅಂಕಿ - ಅಂಶಗಳ ಪ್ರಕಾರ, ಕೇಂದ್ರ ರೈಲ್ವೆ- 560, ಪೂರ್ವ ರೈಲ್ವೆ-1103, ಪೂರ್ವ ಕರಾವಳಿ ರೈಲ್ವೆ- 375, ಉತ್ತರ ರೈಲ್ವೆ-4491, ಉತ್ತರ ಮಧ್ಯ ರೈಲ್ವೆ-1289, ಈಶಾನ್ಯ ರೈಲ್ವೆ- 1762, ಈಶಾನ್ಯ ಗಡಿ ರೈಲ್ವೆ-1101, ವಾಯವ್ಯ ರೈಲ್ವೆ- 992, ದಕ್ಷಿಣ ಮಧ್ಯ ರೈಲ್ವೆ-1120, ಆಗ್ನೇಯ ರೈಲ್ವೆ-2955, ಆಗ್ನೇಯ ಮಧ್ಯ ರೈಲ್ವೆ- 997, ನೈರುತ್ಯ ರೈಲ್ವೆ-60 ಮತ್ತು ಮಶ್ಚಿಮ ಮಧ್ಯೆ ರೈಲ್ವೆಗೆ -1046 ಸಾಧನಗಳನ್ನು ಒದಗಿಸಲಾಗಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಮೋದಿ ಸರ್ಕಾರ ಬಂದ ಮೇಲೆ ರೈಲ್ವೆ ಅಭಿವೃದ್ಧಿಗೆ ಹೆಚ್ಚಿನ ಒತ್ತು: ಸಚಿವ ಅಶ್ವಿನಿ ವೈಷ್ಣವ್