ತುಲಸೇಂದ್ರಪುರಂ (ತಮಿಳುನಾಡು): ತಮಿಳುನಾಡಿನ ಪುಟ್ಟ ಹಳ್ಳಿಯೊಂದು ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ವಿಜಯವನ್ನು ತನ್ನದೇ ಗೆಲುವಿನಂತೆ ಆಚರಿಸಿತು. ವಾಷಿಂಗ್ಟನ್ ಡಿಸಿಯ ಶ್ವೇತಭವನದಿಂದ ಸುಮಾರು 14,000 ಕಿ.ಮೀ ದೂರದಲ್ಲಿರುವ ಈ ಅಪರಿಚಿತ ಗ್ರಾಮವು ಕಮಲಾ ಹ್ಯಾರಿಸ್ ಅವರ ತಾಯಿಯ ಅಜ್ಜ-ಅಜ್ಜಿ ವಾಸವಿದ್ದ ಗ್ರಾಮ. ಕಮಲಾ ಹ್ಯಾರಿಸ್ ಅವರ ಅಜ್ಜ-ಅಜ್ಜಿಯರಾದ ಪಿ ವಿ ಗೋಪಾಲ್ ಮತ್ತು ರಾಜಮ್ಮ ಇಲ್ಲಿ ವಾಸಿಸುತ್ತಿದ್ದರು.
ಪೈಂಗನಾಡು-ತುಲಸೇಂದ್ರಪುರಂ ಗ್ರಾಮವನ್ನು ತಲುಪಲು ತಂಜಾವೂರಿನಿಂದ ಮನ್ನಾರ್ಗುಡಿ ಕಡೆಗೆ ರಸ್ತೆ ಮೂಲಕ ಸುಮಾರು 45 ಕಿ.ಮೀ ಪ್ರಯಾಣಿಸಬೇಕಾಗುತ್ತದೆ ಮತ್ತು ಪ್ರಸ್ತುತ ಇಲ್ಲಿ ಸುಮಾರು 70 ಕುಟುಂಬಗಳು ವಾಸಿಸುತ್ತಿವೆ. 1911ರಲ್ಲಿ ಜನಿಸಿದ ಗೋಪಾಲನ್ ತಮ್ಮ 20ರ ಹರೆಯದಲ್ಲಿದ್ದಾಗ ಸ್ವಾತಂತ್ರ್ಯ ಚಳವಳಿಯಲ್ಲಿ ಸೇರಲು ಗ್ರಾಮವನ್ನು ತೊರೆದರು. ಬಳಿಕ ಉನ್ನತ ಮಟ್ಟದ ಹುದ್ದೆ ಪಡೆದರು.
ಕಮಲಾ ಅವರ ತಾಯಿ ಶ್ಯಾಮಲಾ ಅವರು 1950ರ ದಶಕದಲ್ಲಿ ಯುಎಸ್‌ನಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿ ವೇತನವನ್ನು ಪಡೆದಾಗ, ಗೋಪಾಲನ್ ಮಗಳಿಗೆ ಬೆಂಬಲ ನೀಡಿ ಅಮೆರಿಕಕ್ಕೆ ಕಳುಹಿಸಿದರು.
ವಿದ್ಯಾಭ್ಯಾಸದ ಬಳಿಕ ಯುಎಸ್ನಲ್ಲಿಯೇ ತಮ್ಮ ವೃತ್ತಿಜೀವನ ಆರಂಭಿಸಿದ ಡಾ.ಶ್ಯಾಮಲಾ ಗೋಪಾಲನ್, ಜಮೈಕಾದ ಡೊನಾಲ್ಡ್ ಹ್ಯಾರಿಸ್ ಅವರನ್ನು ವಿವಾಹವಾದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಜನಿಸಿದರು. ಕಮಲಾ ಅವರ ತಂಗಿ - ಮಾಯಾ ಹ್ಯಾರಿಸ್ ವೃತ್ತಿಯಲ್ಲಿ ವಕೀಲರಾಗಿದ್ದಾರೆ.
ಇಲ್ಲಿನ ಶ್ರೀ ಧರ್ಮಸ್ಥ ಅಯ್ಯನಾರ್ ದೇವಸ್ಥಾನಕ್ಕೆ ಕಮಲಾ ಅವರ ಕುಟುಂಬ ದೇಣಿಗೆ ನೀಡುತ್ತದೆ. ದೇವಾಲಯದ ಟ್ರಸ್ಟಿಗಳು ಕುಟುಂಬದಿಂದ ದೇಣಿಗೆ ಸ್ವೀಕರಿಸುತ್ತಿದ್ದಾರೆ. ಆದರೆ, ಪ್ರಸಾದವನ್ನು ಕಮಲಾ ಅವರ ಚಿಕ್ಕಪ್ಪ ಬಾಲಚಂದ್ರನ್ ಮತ್ತು ಚಿಕ್ಕಮ್ಮ ಡಾ.ಸಾರಾಲ ಗೋಪಾಲನ್ ಅವರಿಗೆ ಕಳುಹಿಸಲಾಗುತ್ತದೆ.
ಮತದಾನ ನಡೆಯುತ್ತಿರುವಾಗ, ಪೈಂಗನಾಡು-ತುಲಸೇಂದ್ರಪುರಂ ಗ್ರಾಮಸ್ಥರು ದೇವಾಲಯದಲ್ಲಿ ಸಾಲುಗಟ್ಟಿ ನಿಂತು ಕಮಲಾ ಹ್ಯಾರಿಸ್ ವಿಜಯಕ್ಕಾಗಿ ಪ್ರಾರ್ಥಿಸಿದರು. ಯುನೈಟೆಡ್ ಸ್ಟೇಟ್ಸ್ನಲ್ಲಿ ಮತ ಎಣಿಕೆ ಪ್ರಾರಂಭವಾದಾಗ ದೇವರಲ್ಲಿ ಕಮಲಾ ಹ್ಯಾರಿಸ್ ಗೆಲುವಿಗೆ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು.
ಕಮಲಾ ಹ್ಯಾರಿಸ್ ಅವರ ಚಿಕ್ಕಮ್ಮ ಅವರ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಜೀವನದಲ್ಲಿ ಉತ್ತಮ ಸಾಧನೆ ಮಾಡಿರುವುದಕ್ಕೆ ಡಾ.ಸರಲಾ ಗೋಪಾಲನ್ ಸಂತಸ ವ್ಯಕ್ತಪಡಿಸಿದ್ದಾರೆ. ಭಾರತದ ಪುತ್ರಿ ಅಮೆರಿಕದ ಉಪಾಧ್ಯಕ್ಷೆಯಾಗಿರುವುದಕ್ಕೆ ಪೈಂಗನಾಡು-ತುಲಸೇಂದ್ರಪುರಂ ಮಾತ್ರವಲ್ಲ, ಇಡೀ ಭಾರತ ಹೆಮ್ಮೆ ಪಡುತ್ತಿದೆ.