ಕಾರವಾರ(ಉತ್ತರ ಕನ್ನಡ): ಮುಂಬರುವ ವರ್ಷಗಳಲ್ಲಿ ಭಾರತೀಯ ನೌಕಾಪಡೆ ವಿಶ್ವದ ಅಗ್ರ ಮೂರು ನೌಕಾಪಡೆಗಳಲ್ಲಿ ಒಂದಾಗಲಿದೆ. ರಾಷ್ಟ್ರವನ್ನು ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವುದನ್ನು ಮುಂದುವರಿಸಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾರವಾರದ ಸೀಬರ್ಡ್ ನೌಕಾನೆಲೆಗೆ ಭೇಟಿ ನೀಡಿ ಎರಡನೇ ಹಂತದ ಕಾಮಗಾರಿ ಪ್ರಗತಿಯ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಸಚಿವರು ಮಾತನಾಡಿದರು. ಕಾರವಾರದ ನೌಕಾ ನೆಲೆ ಏಷ್ಯಾದ ಅತಿದೊಡ್ಡ ನೌಕಾ ನೆಲೆಯಾಗಲಿದೆ. ಇದು ಸಶಸ್ತ್ರ ಪಡೆಗಳ ಕಾರ್ಯಾಚರಣೆಯ ಸಿದ್ಧತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ವ್ಯಾಪಾರ, ಆರ್ಥಿಕತೆ ಮತ್ತು ಮಾನವೀಯ ನೆರವು ಕಾರ್ಯಾಚರಣೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಕಡಲ ಮತ್ತು ರಾಷ್ಟ್ರೀಯ ಭದ್ರತೆಗೆ ಅಮೂಲ್ಯವಾದ ಕೊಡುಗೆಯನ್ನು ನೀಡುತ್ತಿರುವ ಸಶಸ್ತ್ರ ಪಡೆಗಳ ಶಕ್ತಿಗಾಗಿ ರಕ್ಷಣಾ ಸಚಿವರು ಭಾರತೀಯ ನೌಕಾಪಡೆಗೆ ಅಭಿನಂದನೆ ಸಲ್ಲಿಸಿದರು. ಜೊತೆಗೆ ಕಾರ್ಯತಂತ್ರ, ರಾಜತಾಂತ್ರಿಕ ಮತ್ತು ವಾಣಿಜ್ಯ ಮಟ್ಟದಲ್ಲಿ ಭಾರತದ ಸ್ಥಾನವನ್ನು ಬಲಪಡಿಸಿದ್ದಾರೆ ಎಂದರು.
ಇದನ್ನೂ ಓದಿ: ಕಾರವಾರ ಕದಂಬ ನೌಕಾನೆಲೆಗೆ ರಕ್ಷಣಾ ಸಚಿವ ರಾಜನಾಥಸಿಂಗ್ ಭೇಟಿ: ಬಿಗಿ ಭದ್ರತೆ
7,500 ಕಿ.ಮೀ.ಗಿಂತಲೂ ಹೆಚ್ಚು ಕರಾವಳಿಯ ಮೂಲಕ, ಸುಮಾರು 1,300 ದ್ವೀಪಗಳು ಮತ್ತು 2.5 ದಶಲಕ್ಷ ಚದರ ಕಿ.ಮೀ.ನ ವಿಶೇಷ ಆರ್ಥಿಕ ವಲಯದ ಮೂಲಕ ನೌಕಾಪಡೆಯು ದೇಶವನ್ನು ರಕ್ಷಿಸುವ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ ಎಂದು ಸೇನೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಸೀಬರ್ಡ್ ಯೋಜನೆಯ ಕಾಂಟ್ರ್ಯಾಕ್ಟರ್ಸ್, ಇಂಜಿನಿಯರ್ಸ್ ಹಾಗೂ ಅಧಿಕಾರಿಗಳ ಜೊತೆ ಸಂವಾದ ನಡೆಸಿದರು. ಇದೇ ವೇಳೆ ರಾಜನಾಥ್ ಸಿಂಗ್ ಯೋಜನೆ ಕಾಮಗಾರಿಯ ಬಗ್ಗೆ ಸಂತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ. ನೌಕಾದಳ ಮುಖ್ಯಸ್ಥ ಆಡ್ಮಿರಲ್ ಕರಂಬೀರ್ ಸಿಂಗ್, ಕಮಾಂಡಿಂಗ್ ವೈಸ್ ಅಡ್ಮಿರಲ್ ಆರ್ ಹರಿಕುಮಾರ್, ರಾಜ್ಯ ನೌಕಾ ಪ್ರದೇಶದ ಧ್ವಜ ಅಧಿಕಾರಿ ಅಡ್ಮಿರಲ್ ಮಹೇಶ್ ಸಿಂಗ್ ಉಪಸ್ಥಿತರಿದ್ದರು.
ನೌಕಾನೆಲೆ ಸಧೃಡಕ್ಕೆ ಬಜೆಟ್ ಹೆಚ್ಚಳ:
ನೌಕಾನೆಲೆಯನ್ನು ಭಾರತೀಯ ಸಶಸ್ತ್ರ ಪಡೆಗಳ ಕಾರ್ಯಾಚರಣೆಗೆ ಇನ್ನಷ್ಟು ಸಧೃಡಗೊಳಿಸುವ ಇಚ್ಚೆ ಇದ್ದು, ಮುಂದಿನ ದಿನಗಳಲ್ಲಿ ಬಜೆಟ್ ಹೆಚ್ಚಿಸಲು ಪ್ರಯತ್ನಿಸುವುದಾಗಿ ಸಚಿವರು ಹೇಳಿದ್ದಾರೆ.
ಐಎನ್ಎಸ್ ಕದಂಬ ನೌಕಾನೆಲೆಯ ಸೀಬರ್ಡ್ ಎರಡನೇ ಹಂತದ ಯೋಜನೆಯ ಮೂಲಸೌಕರ್ಯ ಅಭಿವೃದ್ಧಿಯ ಪ್ರಗತಿ ಹಾಗೂ ವಿಸ್ತರಣೆ ಹಂತದಲ್ಲಿರುವ ನೌಕಾನೆಲೆ ಪರಿಶೀಲನೆ ಬಳಿಕ ಮಾತನಾಡಿದ ಅವರು, ಕಡಲ ಮತ್ತು ರಾಷ್ಟ್ರೀಯ ಭದ್ರತೆಗೆ ಅಮೂಲ್ಯ ಕೊಡುಗೆ ನೀಡುತ್ತಿರುವ ಸಶಸ್ತ್ರ ಪಡೆಗಳಿಗೆ ಭಾರತೀಯ ನೌಕಾಪಡೆಯು ತೋಳ್ಬಲದಂತಿದೆ. ತನ್ನ ಕಾರ್ಯತಂತ್ರದ ಮೂಲಕ ರಾಜತಾಂತ್ರಿಕ ಮತ್ತು ವಾಣಿಜ್ಯ ಮಟ್ಟಗಳಲ್ಲಿ ಭಾರತದ ಸ್ಥಾನವನ್ನು ಇದು ಬಲಪಡಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ರೂಪಿಸಿರುವ ‘ಸಾಗರ್’ (SAGAR/ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆ) ನತ್ತ ಗಮನಹರಿಸಿ, ನೌಕಾಪಡೆಯು ತನ್ನ ಕಡಲ ನೆರೆಹೊರೆಯವರೊಂದಿಗೆ ಭಾರತದ ಸಂಬಂಧವನ್ನು ನಿರಂತರವಾಗಿ ಬಲಪಡಿಸುತ್ತಿದೆ ಎಂದು ಹೇಳಿದರು.
ಸೀಬರ್ಡ್ ಯೋಜನ ವೀಕ್ಷಿಸಲು ಮತ್ತು ಅದನ್ನು ಅರ್ಥೈಸಿಕೊಳ್ಳಲು ಯಾವಾಗಲೂ ಕುತೂಹಲ ಹೊಂದಿದ್ದೆ. ನಾನು ಈ ಹಿಂದೊಮ್ಮೆ ಇಲ್ಲಿನ ಐಎನ್ಎಸ್ ವಿಕ್ರಮಾದಿತ್ಯದಲ್ಲಿ ಒಂದು ರಾತ್ರಿ ತಂಗಿದ್ದೆ. ನಾನು ಮತ್ತು ಅಡ್ಮಿರಲ್ ಕರಂಬೀರ್ ಸಿಂಗ್ ಹೆಲಿಕಾಪ್ಟರ್ನಲ್ಲಿ ಹಿಂದಿರುಗುತ್ತಿದ್ದಾಗ ಅವರು ನನಗೆ ಆಕಾಶದಿಂದ ಯೋಜನೆಯ ಬಗ್ಗೆ ತೋರಿಸಿದ್ದರು. 'ಇದು ಕಾರವಾರ' ಎಂದು ಆ ದಿನ ನಾನು ಕಾರವಾರವನ್ನು ಆಕಾಶದಿಂದ ನೋಡಿದ್ದೆ. ಆದರೆ ಇದೀಗ ಅದನ್ನು ಹತ್ತಿರದಿಂದ ನೋಡಲು ಸಾಧ್ಯವಾಯಿತು ಎಂದು ಸಂತಸ ವ್ಯಕ್ತಪಡಿಸಿದ ಅವರು, ಈ ನೌಕಾನೆಲೆಯ ಬಗ್ಗೆ ನನ್ನ ವಿಶ್ವಾಸ ಹೆಚ್ಚಾಗಿದೆ ಎಂದು ನಾನು ಹೇಳಬಲ್ಲೆ. ಈ ಯೋಜನೆ ಪೂರ್ಣಗೊಂಡ ನಂತರ ನಾವು ಭದ್ರತೆಗೆ ಸಂಬಂಧಿಸಿದಂತೆ ಯಾವೆಲ್ಲ ಸಿದ್ಧತೆ ಮಾಡುತ್ತಿದ್ದೇವೆಯೋ, ಅದು ಬಲಗೊಳ್ಳುವುದಷ್ಟೇ ಅಲ್ಲದೇ, ವ್ಯಾಪಾರ, ಆರ್ಥಿಕತೆ ಮತ್ತು ನಾವು ಒದಗಿಸುವ ಮಾನವೀಯ ನೆರವಿಗೆ ಸಹಕಾರಿಯಾಗುತ್ತದೆ ಎಂದರು.