ಮುಂಬೈ(ಮಹಾರಾಷ್ಟ್ರ): ಜಲಾಂತರ್ಗಾಮಿ ನೌಕೆಯ ಮಾಹಿತಿ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮಂಗಳವಾರ ನೌಕಾ ಕಮಾಂಡರ್, ಇಬ್ಬರು ನೌಕಾಪಡೆ ಯೋಧರು ಮತ್ತು ಇತರ ಇಬ್ಬರನ್ನು ಒಳಗೊಂಡಂತೆ ಐವರನ್ನು ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.
ಕಿಲೋ-ಕ್ಲಾಸ್ (Kilo-class) ಜಲಾಂತರ್ಗಾಮಿ ನೌಕೆಗಳ ಆಧುನೀಕರಣ ವಿಚಾರದಲ್ಲಿ ಗೌಪ್ಯ ಮಾಹಿತಿಯ ಸೋರಿಕೆಗೆ ಸಂಬಂಧಿಸಿದಂತೆ ಭಾರತೀಯ ನೌಕಾಪಡೆಯು ತನಿಖೆ ನಡೆಸಿತ್ತು. ಕೆಲವು ಅನಧಿಕೃತ ಸಿಬ್ಬಂದಿಯಿಂದ ಮಾಹಿತಿ ಸೋರಿಕೆಯಾಗಿದೆ ಎಂಬ ಮಾಹಿತಿ ಹೊರಬಂದಿತ್ತು.
ಸಿಬಿಐ ಮತ್ತು ಭಾರತೀಯ ನೌಕಾಪಡೆ ಎರಡೂ ಕೂಡಾ ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದವು. ದೆಹಲಿ, ನೋಯ್ಡಾ, ಮುಂಬೈ ಮತ್ತು ಹೈದರಾಬಾದ್‌ನ 19 ಸ್ಥಳಗಳಲ್ಲಿ ಸಿಬಿಐ ಶೋಧ ಕಾರ್ಯಾಚರಣೆ ಕೈಗೊಂಡಿತ್ತು. ಇದರ ಜೊತೆಗೆ ಕೆಲವು ಎಲೆಕ್ಟ್ರಾನಿಕ್ ಗ್ಯಾಜೆಟ್ಗಳನ್ನು ಮತ್ತು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿತ್ತು. ಈಗ ಹಲವರನ್ನು ಬಂಧಿಸಲಾಗಿದೆ.
ಕಳೆದ ತಿಂಗಳಷ್ಟೇ ಮಾಹಿತಿ ಸೋರಿಕೆ ಆರೋಪದ ತನಿಖೆ ನಡೆಸಲು ಭಾರತೀಯ ವೈಸ್ ಅಡ್ಮಿರಲ್ ಮತ್ತು ರಿಯರ್ ಅಡ್ಮಿರಲ್ಗೆ ತನಿಖೆ ನಡೆಸಲು ಸೂಚನೆ ನೀಡಲಾಗಿತ್ತು ಮತ್ತು ಭವಿಷ್ಯದಲ್ಲಿ ಇಂಥ ಘಟನೆಗಳು ನಡೆಯದಂತೆ ತಡೆಯಬೇಕೆಂದು ಸೂಚನೆ ನೀಡಲಾಗಿತ್ತು ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಪೆಗಾಸಸ್ ಗೂಢಚಾರಿಕೆ ತನಿಖೆಗೆ ಸ್ವತಂತ್ರ ಸಮಿತಿ ನೇಮಿಸಿದ ಸುಪ್ರೀಂಕೋರ್ಟ್