ನವದೆಹಲಿ: ಫ್ರಾನ್ಸ್ನಲ್ಲಿ ವಾಸವಾಗಿದ್ದ ಯುವಕ ಹಾಗೂ ಆಫ್ಘಾನ್ನಲ್ಲಿ ವಾಸವಾಗಿದ್ದ ಹುಡುಗಿ ಪರಸ್ಪರ ಪ್ರೀತಿಸುತ್ತಿದ್ದರು. ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬಂದಾಗ ಇಬ್ಬರು ಭೇಟಿಯಾಗಿ ದೆಹಲಿ ಮಸೀದಿವೊಂದರಲ್ಲಿ ವಿವಾಹವಾಗಿದ್ದರು. ಆದರೆ ವಾಪಸ್ ಹೋಗುವಾಗ ಕಾನೂನು ಅಡಚಣೆ ಉಂಟಾಗಿತ್ತು. ಇದೀಗ ಭಾರತೀಯ ಸಂವಿಧಾನದ ಪ್ರಕಾರ ಫ್ರಾನ್ಸ್ಗೆ ತೆರಳಲು ದೆಹಲಿ ಹೈಕೋರ್ಟ್ ಆದೇಶ ನೀಡಿದೆ.
ಏನಿದು ಪ್ರಕರಣ?
ಈ ವಿದೇಶಿ ದಂಪತಿಗಳ ಪರ ವಕೀಲ ದಿವ್ಯಾಂಶು ಪಾಂಡೆ ತಿಳಿಸಿರುವ ಪ್ರಕಾರ, ಕಳೆದ ಮಾರ್ಚ್ ತಿಂಗಳಲ್ಲಿ ಇಬ್ಬರು ಭಾರತಕ್ಕೆ ಬಂದಿದ್ದರು. ಈ ವೇಳೆ ಭೇಟಿಯಾಗಿ ಏಪ್ರಿಲ್ 7ರಂದು ಮಸೀದಿವೊಂದರಲ್ಲಿ ವಿವಾಹ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಆಫ್ಘಾನ್ ಪರಿಸ್ಥಿತಿ ಉಲ್ಭಣಗೊಂಡಿದ್ದರಿಂದ ಅಲ್ಲಿಗೆ ತೆರಳು ಸಾಧ್ಯವಾಗಿರಲಿಲ್ಲ. ಹೀಗಾಗಿ ಫ್ರಾನ್ಸ್ಗೆ ಹೋಗಲು ನಿರ್ಧರಿಸಿದ್ದರು. ಈ ವೇಳೆ ಪತ್ನಿಯ ವೀಸಾಕ್ಕಾಗಿ ಫ್ರೆಂಚ್ ರಾಯಭಾರ ಕಚೇರಿಗೆ ತೆರಳಿದಾಗ, ವಿಶೇಷ ವಿವಾಹ ಕಾಯ್ದೆಯಡಿ ಮದುವೆ ನೋಂದಣಿ ಮಾಡದೇ ವೀಸಾ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿತ್ತು.
ಇದಾದ ಬಳಿಕ ದಂಪತಿ ವಿವಾಹ ನೋಂದಣಿಗಾಗಿ ದೆಹಲಿ ಸರ್ಕಾರದ ವೆಬ್ಸೈಟ್ಗೆ ಮೊರೆ ಹೋಗಿದ್ದಾರೆ. ಆದರೆ ಆಧಾರ್ ಕಾರ್ಡ್ ಮತ್ತು ವೋಟಿಂಗ್ ಕಾರ್ಡ್ ಬೇಕು ಎಂಬ ಮಾಹಿತಿ ಗೊತ್ತಾಗಿದೆ. ಹೀಗಾಗಿ ಅದು ಸಾಧ್ಯವಾಗಿಲ್ಲ. ಇದೇ ವೇಳೆ ದಿವ್ಯಾಂಶು ಪಾಂಡೆ ಎಂಬ ವಕೀಲರನ್ನ ಭೇಟಿ ಮಾಡಿದ್ದು, ಇವರ ಪರವಾಗಿ ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಭಾರತೀಯ ಸಂವಿಧಾನದ 14ನೇ ಪರಿಚ್ಛೇದ ಉಲ್ಲೇಖ ಮಾಡಿ, ವಿಶೇಷ ವಿವಾಹ ಕಾಯ್ದೆಯಡಿ ಮದುವೆ ನೋಂದಣಿ ಮಾಡುವಂತೆ ಕೋರಿದ್ದಾರೆ. ವಾದ ಆಲಿಸಿದ ಹೈಕೋರ್ಟ್ ಈ ಬಗ್ಗೆ ದೆಹಲಿ ಸರ್ಕಾರಕ್ಕೆ ನೋಟಿಸ್ ನೀಡುವ ಮೂಲಕ ಪ್ರತಿಕ್ರಿಯೆ ಕೇಳಿದೆ. ಇದಕ್ಕೆ ದೆಹಲಿ ಸರ್ಕಾರ ಸಮ್ಮಿತಿ ನೀಡಿರುವ ಕಾರಣ ಇದೀಗ ಇಬ್ಬರಿಗೂ ವಿಶೇಷ ವಿವಾಹ ಕಾಯ್ದೆಯಡಿ ಹೆಸರು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಸೋಮವಾರ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿದು ಬಂದಿದ್ದು, ಎಲ್ಲ ಕ್ರಮ ಮುಕ್ತಾಯವಾದರೆ ಈ ದಂಪತಿ ಸೆಪ್ಟೆಂಬರ್ ತಿಂಗಳಲ್ಲಿ ಫ್ರಾನ್ಸ್ಗೆ ತೆರಳಬಹುದಾಗಿದೆ.