ಢಾಕಾ(ಬಾಂಗ್ಲಾದೇಶ): ಭಾರತೀಯ ಸಶಸ್ತ್ರ ಪಡೆಗಳ ತುಕಡಿ ಮತ್ತು ನೌಕಾಪಡೆಯ ತುಕಡಿಗಳು ಡಿಸೆಂಬರ್ 16ರಂದು ಢಾಕಾದಲ್ಲಿ ನಡೆಯಲಿರುವ 'ಬಾಂಗ್ಲಾದೇಶ ವಿಜಯ ದಿನಾಚರಣೆ'ಯಲ್ಲಿ ಭಾಗವಹಿಸಲಿವೆ ಎಂದು ಸೋಮವಾರ ಘೋಷಿಸಲಾಗಿದೆ.
ಬಾಂಗ್ಲಾದೇಶದ ನೌಕಾಪಡೆ ಸಿಬ್ಬಂದಿ ಮುಖ್ಯಸ್ಥ ಅಡ್ಮಿರಲ್ ಎಂ.ಶಾಹೀನ್ ಭಾರತದ ನೌಕಾಪಡೆಯ ಮುಖ್ಯಸ್ಥ ಕರಂಬೀರ್ ಸಿಂಗ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ ವೇಳೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಈ ವರ್ಷ ಭಾರತದ ಗಣ್ಯರಾಜ್ಯ ದಿನಾಚರಣೆಯಲ್ಲಿ ಬಾಂಗ್ಲಾದೇಶದ ಸುಮಾರು 122 ಮಂದಿಯ ತುಕಡಿಯೊಂದು ಭಾಗವಹಿಸಿತ್ತು. ಈ ತುಕಡಿಯಲ್ಲಿ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳ ಸಿಬ್ಬಂದಿ ಇದ್ದರು.
ಭಾರತ ಮತ್ತು ಬಾಂಗ್ಲಾದೇಶ ಎರಡೂ ದೇಶಗಳ ಇತಿಹಾಸ, ಭಾಷೆ, ಸಂಸ್ಕೃತಿ ಮತ್ತು ಇತರ ಕೆಲವು ಎರಡೂ ದೇಶಗಳ ಬಾಂಧವ್ಯವನ್ನು ಹೆಚ್ಚಿಸಿವೆ. ಅತ್ಯುತ್ತಮ ದ್ವಿಪಕ್ಷೀಯ ಸಂಬಂಧಗಳು ಸಾರ್ವಭೌಮತ್ವ, ಸಮಾನತೆ, ನಂಬಿಕೆ ಮತ್ತು ತಿಳುವಳಿಕೆಯನ್ನು ಮೀರಿದ ಪಾಲುದಾರಿಕೆಯನ್ನು ಹೊಂದಿರುತ್ತವೆ ಎಂದು ಭಾರತೀಯ ರಕ್ಷಣಾ ಇಲಾಖೆ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.
ಎರಡೂ ರಾಷ್ಟ್ರಗಳ ನಡುವೆ ಸಾಮರಸ್ಯಕ್ಕಾಗಿ ಭಾರತೀಯ ಸೇನಾ ತುಕಡಿಗಳು ಬಾಂಗ್ಲಾದೇಶದ ವಿಜಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿವೆ ಎಂದು ರಕ್ಷಣಾ ಇಲಾಖೆ ಹೇಳಿಕೊಂಡಿದೆ.
ಬಾಂಗ್ಲಾ ವಿಜಯ ದಿನಾಚರಣೆಯ ಹಿನ್ನೆಲೆ: 1971ರ ಡಿಸೆಂಬರ್ 16ರಂದು ಬಾಂಗ್ಲಾದೇಶ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಜಯಗಳಿಸಿದ್ದರ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. 1947ರಿಂದ ಪಾಕಿಸ್ತಾನ ಅವಿಭಾಜ್ಯ ಅಂಗವಾಗಿದ್ದ ಬಾಂಗ್ಲಾದೇಶ ಸ್ವತಂತ್ರಗೊಂಡು ತನ್ನದೇ ಸ್ವಂತ ರಾಷ್ಟ್ರವನ್ನು ಸ್ಥಾಪಿಸಿಕೊಂಡಿತ್ತು. ಈ ವೇಳೆ ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಬಾಂಗ್ಲಾ ಸ್ವಾತಂತ್ರ್ಯದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು.
ಇದನ್ನೂ ಓದಿ: ದೆಹಲಿಯ ಮೂರಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ, ನಾಲ್ವರ ಸಾವು