ಕೀವ್: ಉಕ್ರೇನ್‌ನ ಕೀವ್ ನಗರದಲ್ಲಿ ವಾರಾಂತ್ಯದ ಕರ್ಫ್ಯೂ ತೆಗೆದುಹಾಕಲಾಗಿದ್ದು, ಅಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳು ರೈಲ್ವೆ ನಿಲ್ದಾಣಕ್ಕೆ ಬರುವಂತೆ ಭಾರತೀಯ ರಾಯಭಾರ ಕಚೇರಿ ಸೋಮವಾರ ಸಲಹೆ ನೀಡಿದೆ. ಉಕ್ರೇನ್ ರೈಲ್ವೆಯು ಜನರನ್ನು ಸ್ಥಳಾಂತರಿಸಲು ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ. ಕೀವ್ನಲ್ಲಿ ವಾರಾಂತ್ಯದ ಕರ್ಫ್ಯೂ ಹಿಂತೆಗೆದುಕೊಳ್ಳಲಾಗಿದೆ. ಎಲ್ಲ ವಿದ್ಯಾರ್ಥಿಗಳು ಪಶ್ಚಿಮ ಭಾಗಗಳಿಗೆ ಪ್ರಯಾಣಿಸಲು ರೈಲು ನಿಲ್ದಾಣಕ್ಕೆ ತೆರಳುವಂತೆ ಸೂಚಿಸಲಾಗಿದೆ ಎಂದು ರಾಯಭಾರ ಕಚೇರಿ ಹೇಳಿದೆ.
ರೈಲ್ವೆ ನಿಲ್ದಾಣಗಳಲ್ಲಿ ಹೆಚ್ಚಿನ ಜನಸಂದಣಿ ಉಂಟಾಗುವ ನಿರೀಕ್ಷೆ ಇದ್ದು, ಭಾರತೀಯ ಪ್ರಜೆಗಳು ಶಾಂತಿಯುತವಾಗಿ ಮತ್ತು ಒಗ್ಗಟ್ಟಿನಿಂದ ಇರುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ 102 ನಾಗರಿಕರು ಸಾವು ; 5 ಲಕ್ಷ ನಿರಾಶ್ರಿತರು ಉಕ್ರೇನ್ನಿಂದ ಪಲಾಯನ : ವಿಶ್ವಸಂಸ್ಥೆ
ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ, ರದ್ದತಿ ಮತ್ತು ವಿಳಂಬವಾಗುವ ಸಾಧ್ಯತೆಯ ಬಗ್ಗೆ ಭಾರತೀಯರಿಗೆ ಎಚ್ಚರಿಕೆ ನೀಡಲಾಗಿದೆ. ಭಾರತೀಯರು ತಮ್ಮ ಪಾಸ್‌ಪೋರ್ಟ್, ಹಣ, ಸೇವಿಸಲು ಆಹಾರ, ಚಳಿಗಾಲದ ಉಡುಪುಗಳು ಮತ್ತು ಅಗತ್ಯ ವಸ್ತುಗಳನ್ನು ತರುವಂತೆ ಸೂಚನೆ ನೀಡಲಾಗಿದೆ.
ಸರ್ಕಾರಿ ಅಧಿಕಾರಿಗಳೊಂದಿಗೆ ಯಾವುದೇ ರೀತಿಯ ಮಾತುಕತೆ ನಡೆಸದೇ, ಗಡಿ ಚೆಕ್ಪೋಸ್ಟ್ಗಳಿಗೆ ತೆರಳದಂತೆ ಕೀವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯರಿಗೆ ಸಲಹೆ ನೀಡಿದೆ.