ಕಠ್ಮಂಡು (ನೇಪಾಳ): ತಲೆಮರೆಸಿಕೊಂಡಿರುವ ಖಲಿಸ್ತಾನ್ ಪರ ತೀವ್ರಗಾಮಿ, ಸಿಖ್ ಧರ್ಮ ಬೋಧಕ ಅಮೃತಪಾಲ್ ಸಿಂಗ್ ಪ್ರಸ್ತುತ ನೇಪಾಳದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಕಠ್ಮಂಡುವಿನಲ್ಲಿನ ಭಾರತೀಯ ರಾಯಭಾರ ಕಚೇರಿ ಪ್ರತಿಪಾದಿಸಿದೆ. ಆತ ನೇಪಾಳದಲ್ಲಿದ್ದು, ದೇಶ ಬಿಟ್ಟು ಪಲಾಯನಗೈಯಲು ಯತ್ನಿಸಿದರೆ ಆತನನ್ನು ಬಂಧಿಸುವಂತೆ ನೇಪಾಳ ಸರ್ಕಾರಕ್ಕೆ ಅದು ಮನವಿ ಮಾಡಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಕಾನ್ಸುಲರ್ ಸೇವೆಗಳ ಇಲಾಖೆಗೆ ಮಾರ್ಚ್ 25 ರಂದು ಬರೆದ ಪತ್ರದಲ್ಲಿ ಭಾರತ ರಾಯಭಾರಿ ಕಚೇರಿ ತನ್ನ ಹೇಳಿಕೆ ದಾಖಲಿಸಿದೆ. ಅಮೃತಪಾಲ್ ಸಿಂಗ್ ನೇಪಾಳದ ಮೂಲಕ ಯಾವುದೇ ಮೂರನೇ ದೇಶಕ್ಕೆ ಪ್ರಯಾಣಿಸಲು ಅನುಮತಿ ನೀಡದಂತೆ ವಲಸೆ ಇಲಾಖೆಗೆ ತಿಳಿಸಲು ಸಚಿವಾಲಯವು ವಿನಂತಿಸುತ್ತದೆ ಮತ್ತು ಈ ಕಾರ್ಯಾಚರಣೆಯ ಸೂಚನೆಯ ಮೇರೆಗೆ ನೇಪಾಳದಿಂದ ಭಾರತೀಯ ಪಾಸ್‌ಪೋರ್ಟ್ ಅಥವಾ ಯಾವುದೇ ನಕಲಿ ಪಾಸ್‌ಪೋರ್ಟ್ ಬಳಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಆತನನ್ನು ಬಂಧಿಸಿ ಎಂದು ಪತ್ರದಲ್ಲಿ ಬರೆಯಲಾಗಿದೆ.
ಪತ್ರ ಮತ್ತು ಸಿಂಗ್ ಅವರ ವೈಯಕ್ತಿಕ ವಿವರಗಳನ್ನು ಹೋಟೆಲ್‌ಗಳು ಹಾಗೂ ವಿಮಾನಯಾನ ಸಂಸ್ಥೆಗಳಿಗೆ ಸಂಬಂಧಿಸಿದ ಎಲ್ಲಾ ಏಜೆನ್ಸಿಗಳಿಗೆ ರವಾನಿಸಲಾಗಿದೆ ಎಂದು ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ. ಅಮೃತ್ಪಾಲ್ ಸಿಂಗ್ ಹಲವಾರು ಹೆಸರುಗಳಲ್ಲಿ ಅನೇಕ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾನೆ ಎಂದು ಹೇಳಲಾಗಿದೆ. ಪಂಜಾಬ್‌ನಲ್ಲಿ ಅಮೃತಪಾಲ್ ಸಿಂಗ್ ಮತ್ತು ಅವರ ಸಹಚರರನ್ನು ಹುಡುಕಲು ಭಾರಿ ಕಾರ್ಯಾಚರಣೆ ನಡೆಯುತ್ತಿರುವ ಮಧ್ಯೆ ಈ ಬೆಳವಣಿಗೆ ನಡೆದಿದೆ.
ಅಮೃತಪಾಲ್ ಸಿಂಗ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ ಮತ್ತು ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ. ಮಾರ್ಚ್ 18 ರಿಂದ ಆತನನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದ್ದರೂ ಆತ ಪರಾರಿಯಾಗಿದ್ದಾನೆ. ಸ್ವಯಂ ಘೋಷಿತ ಧರ್ಮ ಬೋಧಕ ಅಮೃತ್ ಪಾಲ್ ಸಿಂಗ್ ಕಳೆದ ವರ್ಷ ದುಬೈನಿಂದ ಹಿಂತಿರುಗಿದ್ದ.
ಅಮೃತಪಾಲ್ ಸಿಂಗ್ ಈತನ ಆಪ್ತ ಸಹಾಯಕ ತೇಜಿಂದರ್ ಸಿಂಗ್ ಗಿಲ್ ಎಂಬಾತನಿಗೆ ಆಶ್ರಯ ನೀಡಿದ್ದ ಪಂಜಾಬ್ ನ ಲುಧಿಯಾನ ಜಿಲ್ಲೆಯ ಖನ್ನಾ ನಗರದ ಬಲ್ವಂತ್ ಸಿಂಗ್ ನನ್ನು ಪಂಜಾಬ್ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ತೇಜಿಂದರ್ ಸಿಂಗ್ ಗಿಲ್ ಅಲಿಯಾಸ್ ಗೂರ್ಖಾ ಬಾಬಾ ಈತ ಅಮೃತಪಾಲ್ ಸಿಂಗ್ ತಂಡದ ಪ್ರಮುಖ ಸದಸ್ಯನಾಗಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅಮೃತಪಾಲ್ ಸಿಂಗ್ ಬಂಧನದ ವದಂತಿಗಳು ಮತ್ತು ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಪಂಜಾಬ್ ಪೊಲೀಸರು ಶನಿವಾರ ಜನರಿಗೆ ಮನವಿ ಮಾಡಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಟಿಂಡಾ ಎಸ್‌ಎಸ್‌ಪಿ ಗುಲ್ನೀತ್ ಖುರಾನಾ, ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಅಮೃತಪಾಲ್ ಸಿಂಗ್ ಬಂಧನದ ನಕಲಿ ವರದಿಗಳನ್ನು ನಂಬಬೇಡಿ ಎಂದು ನಾವು ಜನರನ್ನು ಕೋರುತ್ತೇವೆ ಎಂದು ಹೇಳಿದರು. ಅಮೃತಪಾಲ್‌ಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು ಯುಕೆ, ಯುಎಸ್ ಮತ್ತು ಕೆನಡಾದಲ್ಲಿ ಕುಳಿತಿರುವ ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಬಿಎಸ್‌ಎಫ್ ತುಕಡಿಗಳು ಮತ್ತು ಪೊಲೀಸ್ ಸಿಬ್ಬಂದಿ ಮತ್ತು ಬಹದ್ದೂರ್‌ಗಢದ 140 ಭದ್ರತಾ ಸಿಬ್ಬಂದಿಯನ್ನು ಪ್ರಸ್ತುತ ಭಟಿಂಡಾದಲ್ಲಿ ಶಾಂತಿ ಕಾಪಾಡಲು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ : ಅಮೆರಿಕದಲ್ಲಿ ಖಲಿಸ್ತಾನಿಗಳ ಉದ್ಧಟತನ: ಪಾಸ್‌ಪೋರ್ಟ್ ರದ್ದತಿಗೆ ಆಗ್ರಹಿಸಿ ದೂರು