ಸ್ಯಾನ್‌ಫ್ರಾನ್ಸಿಸ್ಕೋ : ಭಾರತೀಯ-ಅಮೆರಿಕನ್ ರಾಜ್ ಸುಬ್ರಮಣ್ಯಂ ಅವರು ಯುಎಸ್ ಮೂಲದ ಬಹುರಾಷ್ಟ್ರೀಯ ಸಾರಿಗೆ ಮತ್ತು ಕೊರಿಯರ್ ವಿತರಣಾ ಸಂಸ್ಥೆ ಫೆಡ್‌ಎಕ್ಸ್‌ನ ಅಧ್ಯಕ್ಷ ಮತ್ತು ಸಿಇಒ ಆಗಿ ಆಯ್ಕೆಯಾಗಿದ್ದಾರೆ. ಜೂನ್ 1ರಂದು ಫ್ರೆಡ್ರಿಕ್ ಡಬ್ಲ್ಯೂ ಸ್ಮಿತ್ ಅಧ್ಯಕ್ಷ ಮತ್ತು ಸಿಇಒ ಸ್ಥಾನದಿಂದ ಕೆಳಗಿಳಿಯಲಿದ್ದಾರೆ.
ಅವರ ಜಾಗವನ್ನು ಸುಬ್ರಮಣ್ಯಂ ಅಲಂಕರಿಸಲಿದ್ದಾರೆ. ಸ್ಮಿತ್ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಸಂಸ್ಥೆ ಸೋಮವಾರ ಪ್ರಕಟಿಸಿದೆ. ಜನ ಸೇವೆ ಮತ್ತು ಲಾಭದ ತತ್ವಗಳನ್ನು ತಲೆಯಲ್ಲಿಟ್ಟುಕೊಂಡು ಕಂಪನಿಯ ಮರುಕಲ್ಪನೆಯ ಬಗ್ಗೆ ಯೋಚಿಸಲಾಗುವುದು ಎಂದು ಸುಬ್ರಮಣ್ಯಂ ಹೇಳಿದ್ದಾರೆ.
ಹಾಲಿ ಅಧ್ಯಕ್ಷ ಸ್ಮಿತ್, ಮುಂದೇನು ಎಂದು ಯೋಚಿಸಿದಾಗ ರಾಜ್ ಸುಬ್ರಮಣ್ಯಂ ಅವರು ಫೆಡ್ಎಕ್ಸ್ ಅನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗುತ್ತಾರೆ ಎಂಬ ತೃಪ್ತಿಯ ಭಾವನೆ ನನ್ನಲ್ಲಿದೆ. ಒಬ್ಬ ಕಾರ್ಯನಿರ್ವಾಹಕ ಅಧ್ಯಕ್ಷನಾಗಿ ನಾನು ಮಂಡಳಿಯ ಆಡಳಿತ ಮತ್ತು ಸುಸ್ಥಿರತೆ, ನಾವೀನ್ಯತೆ ಮತ್ತು ಸಾರ್ವಜನಿಕ ನೀತಿ ಸೇರಿದಂತೆ ಜಾಗತಿಕ ಪ್ರಾಮುಖ್ಯತೆಯ ವಿಷಯಗಳ ಮೇಲೆ ಗಮನಹರಿಸುತ್ತೇನೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸುಬ್ರಮಣ್ಯಂ ಅವರು 2020ರಲ್ಲಿ ಫೆಡೆಕ್ಸ್ ಬೋರ್ಡ್ ಆಫ್ ಡೈರೆಕ್ಟರ್‌ಗೆ ಆಯ್ಕೆಯಾಗಿದ್ದರು. ಇದಕ್ಕೂ ಮೊದಲು, ಅವರು ವಿಶ್ವದ ಅತಿದೊಡ್ಡ ಸಾರಿಗೆ ಕಂಪನಿ ಫೆಡ್ಎಕ್ಸ್ ಎಕ್ಸ್‌ಪ್ರೆಸ್‌ನ ಅಧ್ಯಕ್ಷ ಮತ್ತು ಸಿಇಒ ಆಗಿ ಕೆನಡಾದಲ್ಲಿ ಸೇವೆ ಸಲ್ಲಿಸಿದರು. 1991ರಲ್ಲಿ ಫೆಡ್‌ಎಕ್ಸ್‌ಗೆ ಸೇರಿದಾಗಿನಿಂದ ಏಷ್ಯಾ ಮತ್ತು ಯುಎಸ್‌ನಾದ್ಯಂತ ಹಲವಾರು ಮ್ಯಾನೇಜ್‌ಮೆಂಟ್ ಮತ್ತು ಮಾರ್ಕೇಟಿಂಗ್ನಲ್ಲಿ ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ: ರಷ್ಯಾದ ಬಿಲಿಯನೇರ್, ಉಕ್ರೇನ್ನ ಸಂಧಾನಕಾರರ ಮೇಲೆ ಶಂಕಿತ ವಿಷ ದಾಳಿ : ವರದಿ
ಪ್ರಪಂಚದಾದ್ಯಂತ ಇರುವ ನಮ್ಮ ತಂಡದ 6,00,000 ಸದಸ್ಯರ ಬಗ್ಗೆ ನನಗೆ ಅಪಾರವಾದ ಹೆಮ್ಮೆ ಇದೆ. ನಾವು ಒಟ್ಟಾಗಿ ಜಗತ್ತನ್ನು ಬದಲಾಯಿಸುವ ಕಲ್ಪನೆಗಳನ್ನು ಹೊಂದಿದ್ದೇವೆ ಮತ್ತು ನಮ್ಮ ಜನರು, ಗ್ರಾಹಕರು ಮತ್ತು ಷೇರುದಾರರಿಗೆ ಹೊಸ ಮೌಲ್ಯವನ್ನು ಒದಗಿಸುತ್ತೇವೆ ಎಂದು ಸುಬ್ರಮಣ್ಯಂ ಹೇಳಿದರು.