ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಹಾವಳಿ ಕಡಿಮೆಯಾಗಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಮೇಲೆ ಹೇರಿದ್ದ ನಿರ್ಬಂಧ ಹಿಂಪಡೆದುಕೊಂಡಿದೆ. ಹೀಗಾಗಿ ಡಿಸೆಂಬರ್ 15ರಿಂದ ಯಾವುದೇ ರೀತಿಯ ಮಾರ್ಗಸೂಚಿ ಇಲ್ಲದೇ ಸೇವೆ ಆರಂಭಗೊಳ್ಳಲಿದೆ. ಆದರೆ 14 ದೇಶಗಳ ಮೇಲೆ ಈಗಾಗಲೇ ಹೇರಿಕೆ ಮಾಡಿರುವ ನಿರ್ಬಂಧ ಮುಂದುವರೆಯಲಿದೆ.
ಕಳೆದ ಎರಡು ದಿನಗಳ ಹಿಂದೆ ಇದೇ ವಿಚಾರವಾಗಿ ಮಾತನಾಡಿದ್ದ ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ಕಾರ್ಯದರ್ಶಿ ರಾಜೀವ್ ಬನ್ಸಾಲ್, ವರ್ಷಾಂತ್ಯದ ವೇಳೆಗೆ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಯಲ್ಲಿನ ಮಾರ್ಗಸೂಚಿಯಲ್ಲಿ ಸಡಲಿಕೆ ಮಾಡುವುದಾಗಿ ತಿಳಿಸಿದ್ದರು. ಇದರ ಬೆನ್ನಲ್ಲೇ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಪ್ರಮುಖವಾಗಿ ಯುಕೆ, ಫ್ರಾನ್ಸ್, ಜರ್ಮನಿ, ನೆದರ್ಲ್ಯಾಂಡ್, ಫಿನ್ಲ್ಯಾಂಡ್, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಚೀನಾ, ಮಾರಿಷಸ್, ನ್ಯೂಜಿಲ್ಯಾಂಡ್, ಸಿಂಗಾಪುರ, ಬಾಂಗ್ಲಾದೇಶ, ಜಿಂಬಾಬ್ವೆ ದೇಶಗಳ ಮೇಲೆ ನಿರ್ಬಂಧ ವಿಧಿಸಲಾಗಿದ್ದು, ಉಳಿದಂತೆ ಬೇರೆ ದೇಶಗಳಿಗೆ ಯಾವುದೇ ನಿರ್ಬಂಧವಿಲ್ಲದೇ ವಿಮಾನಗಳು ಹಾರಾಟ ನಡೆಸಲಿವೆ.
ದಕ್ಷಿಣ ಆಫ್ರಿಕಾದಲ್ಲಿ ಹೊಸ ರೂಪಾಂತರ ಕೊರೊನಾ ಕಾಣಿಸಿಕೊಂಡಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದ್ದು,ಸಹಜ ಸ್ಥಿತಿಗೆ ಬಂದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ದೇಶಿ ವಿಮಾನಯಾನ ಸೇವೆಯಲ್ಲಿ ಈಗಾಗಲೇ ಶೇ 100ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಹಸಿರು ನಿಶಾನೆ ತೋರಲಾಗಿದೆ. ಇದರ ಬೆನ್ನಲ್ಲೇ ಹೊಸ ವರ್ಷದ ಆದಿಯಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಯಲ್ಲೂ ಇಂತಹ ನಿರ್ಧಾರ ಕೈಗೊಳ್ಳಲಾಗಿದೆ.