ನವದೆಹಲಿ: ಕೊರೊನಾ ಹೊಡೆದೋಡಿಸಲು ಭಾರತ ಸರ್ಕಾರ ಪಣತೊಟ್ಟಿದೆ. ಪರಿಣಾಮ ಅಮೆರಿಕವನ್ನೂ ಹಿಂದಿಕ್ಕಿ ಭಾರತ ಮುನ್ನುಗ್ಗುತ್ತಿದೆ. 32 ಕೋಟಿಗಿಂತಲೂ ಹೆಚ್ಚು ವಾಕ್ಸಿನೇಷನ್ ನೀಡಿದೆ. ಈ 32 ಕೋಟಿ ಲಸಿಕೆಯನ್ನು ಹಾಕಲು ಭಾರತ ತೆಗೆದುಕೊಂಡಿದ್ದು ಕೇವಲ 163 ದಿವಸ.
![India taking a distinct lead in total vaccine doses administered in the world](https://etvbharatimages.akamaized.net/etvbharat/prod-images/e5czfqiwqaogj2t_2906newsroom_1624966818_254.jpg)
ಆದರೆ ಇದೇ 32 ಕೋಟಿ ಜನರಿಗೆ ಲಸಿಕೆ ನೀಡಲು ಅಮೆರಿಕ ತೆಗೆದುಕೊಂಡ ಒಟ್ಟು ಅವಧಿ 193 ದಿವಸ ಅನ್ನುವುದು ವಿಶೇಷ. ಈ ಅಂಕಿ - ಅಂಶಗಳನ್ನ ಕೇಂದ್ರ ಆರೋಗ್ಯ ಇಲಾಖೆ ಇಂದು ನೀಡಿದ್ದು, ಭಾರತದ ಸಾಧನೆಯನ್ನು ದೇಶದ ಜನರ ಮುಂದಿಟ್ಟಿದೆ. ಸುಮಾರು 27.27 ಕೋಟಿ ಜನರು ಮೊದಲ ಡೋಸ್ ಪಡೆದರೆ, 5.84 ಕೋಟಿ ಜನರು 2ನೇ ಡೋಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಹೇಳಿದ್ದಾರೆ.
ಪಾಸಿಟಿವ್ ಕೇಸ್ಗಳಲ್ಲಿ ನಿರಂತರ ಇಳಿಕೆ
ಈ ನಡುವೆ ದಿನಕ್ಕೆ ನಾಲ್ಕು ಲಕ್ಷಕ್ಕೆ ತಲುಪುತ್ತಿದ್ದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಈಗ ಸಾವಿರದ ಲೆಕ್ಕಕ್ಕೆ ಇಳಿಕೆ ಕಂಡಿದೆ. ಇದು ದೇಶದ ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ. ನಿರಂತರವಾಗಿ ಧನಾತ್ಮಕ ಕೇಸ್ಗಳು ಇಳಿಕೆ ಕಂಡು ಬರುತ್ತಿದ್ದು, ಚೇತರಿಕೆ ಪ್ರಮಾಣ ಶೇ 96.9ಕ್ಕೆ ಏರಿಕೆ ಕಂಡಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಸ್ಪಷ್ಟಪಡಿಸಿದ್ದಾರೆ.