ನವದೆಹಲಿ : ದೇಶದಲ್ಲಿ ಬೇಸಿಗೆ ಹೆಚ್ಚಾದಂತೆ ವಿದ್ಯುತ್ ಬೇಡಿಕೆಯೂ ಅಧಿಕವಾಗಿವೆ. ಈ ನಡುವೆ 150ಕ್ಕೂ ಹೆಚ್ಚು ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಿದ್ದು, ವಿದ್ಯುತ್ ಬಿಕ್ಕಟ್ಟು ಎದುರಾಗುವ ಸಾಧ್ಯತೆ ಇದೆ. 173 ವಿದ್ಯುತ್ ಸ್ಥಾವರಗಳಲ್ಲಿ ಏ.21ಕ್ಕೆ 66.32 ಮಿಲಿಯನ್ ಟನ್ ಕಲ್ಲಿದ್ದಲು ಸಂಗ್ರಹ ಇರಬೇಕಿತ್ತು. ಆದರೆ, ಪ್ರಸ್ತುತ 21.93 ಮಿಲಿಯನ್ ಟನ್‌ಗಳಷ್ಟು ಮಾತ್ರ ಕಲ್ಲಿದ್ದಲು ದಾಸ್ತಾನು ಇದೆ.
ಕಲ್ಲಿದ್ದಲು ಅಭಾವದಿಂದ ಕಳೆದ ಎಂಟು ವರ್ಷಗಳಲ್ಲೇ ಅಧಿಕವಾದ ವಿದ್ಯುತ್ ಕ್ಷಾಮ ಉದ್ಭವಿಸುವ ಲಕ್ಷಣಗಳು ಕಾಣುತ್ತಿವೆ. ಕೇಂದ್ರ ಸರ್ಕಾರದ ನಿಯಮದ ಪ್ರಕಾರವೇ ಆರ್ಥಿಕ ವರ್ಷದ ಆರಂಭದಲ್ಲಿ 24 ದಿನಗಳಿಗೆ ಆಗುವಷ್ಟು ಕಲ್ಲಿದ್ದಲು ಕಡ್ಡಾಯವಾಗಿ ದಾಸ್ತಾನು ಇರಬೇಕಿತ್ತು. ಆದರೆ, ಸದ್ಯ ಕೇವಲ 9 ದಿನಗಳಷ್ಟು ಕಲ್ಲಿದ್ದಲು ಸಂಗ್ರಹ ಇದ್ದು, 2014ರ ಆರ್ಥಿಕ ವರ್ಷದ ನಂತರ ಅತಂತ್ಯ ಕಡಿಮೆ ದಾಸ್ತಾನು ಇದಾಗಿದೆ ಎಂದು ಹೇಳಲಾಗುತ್ತಿದೆ.
150 ಸರ್ಕಾರಿ ಸ್ವಾಮ್ಯದ ವಿದ್ಯುತ್ ಸ್ಥಾವರಗಳಲ್ಲಿ ಪೈಕಿ 81 ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹವು ನಿರ್ಣಾಯಕವಾಗಿದೆ. ಮತ್ತೊಂದೆಡೆ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಲೇ ಇದೆ. 2019ರಲ್ಲಿ 106.6 ಶತಕೋಟಿ ಯೂನಿಟ್ (ಬಿಲಿಯನ್ ಯೂನಿಟ್) ಬೇಡಿಕೆ ಇತ್ತು. ಇದು 2021ರಲ್ಲಿ 124.2 ಬಿಲಿಯನ್ ಯೂನಿಟ್ ಮತ್ತು 2022ರಲ್ಲಿ 132 ಬಿಲಿಯನ್ ಯೂನಿಟ್ಗೆ ಹೆಚ್ಚಾಗಿದೆ.
ಕಲ್ಲಿದ್ದಲು ಕೊರತೆ ಇದ್ದರೂ ಪರಿಸ್ಥಿತಿಯನ್ನು ನಿಭಾಯಿಸಬಹುದಿತ್ತು. ಆದರೆ, ಬೇಸಿಗೆ ಆರಂಭದಲ್ಲೇ ಉಷ್ಣಾಂಶ ಅಧಿಕವಾಗಿದ್ದರಿಂದ ವಿದ್ಯುತ್ ಬೇಡಿಕೆಯಲ್ಲಿ ಘಾತೀಯವಾಗಿ ಹೆಚ್ಚಾಗಿದೆ. ಇದು ಬೇಡಿಕೆ-ಪೂರೈಕೆ ಅಂತರವನ್ನೂ ಹೆಚ್ಚಿಸಿದೆ ಎಂದು ವಿದ್ಯುತ್ ವಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇತ್ತ, ಕಡಿಮೆ ಕಲ್ಲಿದ್ದಲು ದಾಸ್ತಾನು ನಡುವೆ ಪಂಜಾಬ್, ಉತ್ತರಪ್ರದೇಶ, ಮಹಾರಾಷ್ಟ್ರ, ಹರಿಯಾಣ ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳು ವಿದ್ಯುತ್ ಕಡಿತಕ್ಕೆ ಸಾಕ್ಷಿಯಾಗುತ್ತಿವೆ. ಇನ್ನೊಂಡೆಡೆ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯ ರೈಲ್ವೆ ರೇಕ್‌ಗಳ ಸಮಸ್ಯೆಯೂ ಇದೆ. ಇದರಿಂದಲೂ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ ಮತ್ತಷ್ಟು ಹೆಚ್ಚಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಆಂಧ್ರಪ್ರದೇಶದಲ್ಲಿ ವಿದ್ಯುತ್ ಅಭಾವ: 'ಪವರ್ ಹಾಲಿಡೇ' ಘೋಷಿಸಿದ ಸರ್ಕಾರ
ಕೇಂದ್ರ ಸರ್ಕಾರ ವಿರುದ್ಧ ಟೀಕೆ : ವಿದ್ಯುತ್ ಕೊರತೆ ಎದುರಿಸುತ್ತಿರುವ ರಾಜ್ಯಗಳು ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಮತ್ತು ವಿದ್ಯುತ್ ಉತ್ಪಾದನೆಗಾಗಿ ಛತ್ತೀಸ್ಗಢ್ವನ್ನು ಅವಲಂಬಿಸ ತೊಡಗಿವೆ. ಆದರೆ, ಆಯಾ ರಾಜ್ಯಗಳಿಗೆ ಅಗತ್ಯವಾದ ಕಲ್ಲಿದ್ದಲು ಪೂರೈಕೆಯನ್ನು ಕೇಂದ್ರ ಸರ್ಕಾರ ಮಾಡುತ್ತಿಲ್ಲ ಎಂದು ಕೆಲ ರಾಜ್ಯಗಳು ಟೀಕೆ ಮಾಡಿವೆ. ಇದರೊಂದಿಗೆ ಆಯಾ ರಾಜ್ಯಗಳಲ್ಲಿ ವಿರೋಧ ಪಕ್ಷಗಳು ಸಹ ಆಡಳಿತಾರೂಢ ಪಕ್ಷಗಳ ವಿರುದ್ಧ ಮುಗಿಬೀಳುತ್ತಿವೆ.
ದೇಶದಲ್ಲಿ ಬೇಡಿಕೆಗೆ ಅನುಗುಣವಾಗಿ ಕಲ್ಲಿದ್ದಲು ಪೂರೈಕೆಯಾಗುತ್ತಿಲ್ಲ. ಅದರಲ್ಲೂ ಕೇಂದ್ರದಿಂದ ಸಾಕಷ್ಟು ಕಲ್ಲಿದ್ದಲು ವಿವಿಧ ರಾಜ್ಯಗಳಿಗೆ ಪೂರೈಕೆಯಾಗುತ್ತಿದೆ. ಆದರೆ, ಮಹಾರಾಷ್ಟ್ರಕ್ಕೆ ಅಗತ್ಯ ಪ್ರಮಾಣದಲ್ಲಿ ಸಿಗುತ್ತಿಲ್ಲ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ದೂರಿದ್ದಾರೆ. ಅಲ್ಲದೇ, ಕಲ್ಲಿದ್ದಲು ಆಮದು ಮತ್ತು ವಿದ್ಯುತ್ ಉತ್ಪಾದನೆಗಾಗಿ ಛತ್ತೀಸ್ಗಢ್ನಲ್ಲಿ ಕಲ್ಲಿದ್ದಲು ಗಣಿ ಸ್ವಾಧೀನಪಡಿಸಿಕೊಳ್ಳಲು ನಮ್ಮ ಸರ್ಕಾರ ಯೋಚಿಸುತ್ತಿದೆ ಎಂದು ತಿಳಿಸಿದ್ದಾರೆ.
ವಿದ್ಯುತ್ ಕಡಿತ ವಿಚಾರವಾಗಿ ತಮಿಳುನಾಡು ಸರ್ಕಾರದ ವಿರುದ್ಧ ಅಲ್ಲಿನ ಪ್ರತಿಪಕ್ಷವಾದ ಎಐಎಡಿಎಂಕೆ ನಾಯಕ, ಮಾಜಿ ಸಿಎಂ ಪನ್ನೀರ್ಸೆಲ್ವಂ ವಾಗ್ದಾಳಿ ನಡೆಸಿದ್ದಾರೆ. ವಿದ್ಯುತ್ ಅಭಾವ ಪರಿಹರಿಸಲು ಡಿಎಂಕೆ ಸರ್ಕಾರ ಮುಂದಾಗುತ್ತಿಲ್ಲ. ಕಣ್ಣು ಕಳೆದುಕೊಂಡ ಒಬ್ಬ ವ್ಯಕ್ತಿ ಸೂರ್ಯನಮಸ್ಕಾರ ಹಾಕುವಂತೆ ಸರ್ಕಾರದ ಧೋರಣೆಯಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಸಿಎಂ ಭಾಷಣದ ವೇಳೆ ವಿದ್ಯುತ್ ಶಾಕ್ : ಮಧ್ಯಪ್ರದೇಶದಲ್ಲೂ ವಿದ್ಯುತ್ ಅಭಾವ ಕಾಡುತ್ತಿದೆ. ಅದರಲ್ಲೂ ಶುಕ್ರವಾರ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಭಾಷಣ ಮಾಡುತ್ತಿದ್ದಾಗಲೇ ವಿದ್ಯುತ್ ಕೈಕೊಟ್ಟಿದೆ. ಇದು ಆಡಳಿತರೂಢ ಬಿಜೆಪಿ ಸರ್ಕಾರಕ್ಕೆ ಇರುಸು ಮುರಿಸು ಉಂಟಾಗುವಂತೆ ಮಾಡಿದೆ.
ಸಿಎಂ ಭಾಷಣ ಮಾಡುತ್ತಿದ್ದಾಗ ವಿದ್ಯುತ್ ಕಡಿತವಾಗಿದೆ. ಆಗ ಮೈಕ್ ಆದರೂ ಕೆಲಸ ಮಾಡುತ್ತಿದೆಯೋ ಇಲ್ಲವೋ ಎಂದು ಪರಿಶೀಲಿಸುತ್ತಾ ಸಿಎಂ, 'ಕಲ್ಲಿದ್ದಲು ಬಿಕ್ಕಟ್ಟು ಇದೆ. ಈ ಸಂಬಂಧ ಬುಧವಾರ ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜೊತೆ ಮಾತನಾಡಿದ್ದೇನೆ' ಎಂದು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: 100 ಅಡಿ ಎತ್ತರದ ವಿದ್ಯತ್ ಟವರ್ ಏರಿ ಕುಳಿತ ಯುವಕ : ಕೆಳಗಿಳಿಸಲು ಹರಸಾಹಸ