ನವದೆಹಲಿ : ಆಫ್ಘಾನಿಸ್ತಾನದಲ್ಲಿ ಈವರೆಗೂ ಕಂಡು ಕೇಳರಿಯದ ಭಾರೀ ಭೂಕಂಪನವಾಗಿದೆ. ಸಾವಿರಾರು ಜನರು ಪ್ರಾಣ ಕಳೆದುಕೊಂಡು ಹಲವಾರು ಜನ ಗಾಯಗೊಂಡಿದ್ದಾರೆ. ಈ ನಡುವೆ ನೊಂದು ಬೆಂದಿರುವ ರಾಷ್ಟ್ರಕ್ಕೆ ಭಾರತ ಬೆನ್ನೆಲುಬಾಗಿ ನಿಂತಿದೆ. ಈಗಾಗಲೇ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದೆ.
ಆಫ್ಘಾನಿಸ್ತಾನದ ಜನರೊಂದಿಗೆ ಇರುತ್ತೇವೆ. ಅವರಿಗೆ ಅಗತ್ಯವಿರುವ ಪರಿಹಾರ ಹಾಗೂ ಸಹಾಯವನ್ನು ಒದಗಿಸಲು ದೃಢವಾಗಿ ಬದ್ಧವಾಗಿದ್ದೇವೆ ಎಂದು ಭಾರತ ಹೇಳಿದೆ. ಆಫ್ಘಾನಿಸ್ತಾನದ ಜನರಿಗೆ ಅವರ ಕಷ್ಟಗಳನ್ನು ಪರಿಹರಿಸಲು ಈಗಾಗಲೇ ಎರಡು ವಿಮಾನಗಳಲ್ಲಿ 27 ಟನ್ ಪರಿಹಾರ ಸಾಮಗ್ರಿಗಳನ್ನು ರವಾನಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.
ಆಫ್ಘಾನಿಸ್ತಾನದ ಪೂರ್ವ ಪಕ್ಟಿಕಾ ಪ್ರಾಂತ್ಯದಲ್ಲಿ ಬುಧವಾರ ಪ್ರಬಲ ಭೂಕಂಪ ಸಂಭವಿಸಿದೆ. ಸುಮಾರು 1,000 ಜನರು ಸಾವನ್ನಪ್ಪಿದ್ದಾರೆ ಮತ್ತು 1,500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಜೂನ್ 22ರಂದು ಎರಡು ವಿಮಾನಗಳಲ್ಲಿ 27 ಟನ್ ತುರ್ತು ಪರಿಹಾರ ಸಹಾಯವನ್ನು ರವಾನಿಸಿದೆ. ಈ ಬಗ್ಗೆ ಆಫ್ಘಾನಿಸ್ತಾನದ ಎಂಇಎ ಸಂತಸಪಟ್ಟಿದೆ.
ಪರಿಹಾರ ನೆರವಿನಲ್ಲಿ ರಿಡ್ಜ್ ಟೆಂಟ್‌ಗಳು, ಸ್ಲೀಪಿಂಗ್ ಬ್ಯಾಗ್‌ಗಳು, ಹೊದಿಕೆಗಳು, ಮಲಗುವ ಚಾಪೆಗಳು ಇತ್ಯಾದಿ ಸೇರಿದಂತೆ ಅಗತ್ಯ ವಸ್ತುಗಳನ್ನು ಒಳಗೊಂಡಿದೆ. ಇವನ್ನು ಮಾನವೀಯ ವ್ಯವಹಾರಗಳ ಸಮನ್ವಯದ ವಿಶ್ವಸಂಸ್ಥೆಯ ಕಚೇರಿ (UNOCHA) ಮತ್ತು ಆಫ್ಘಾನ್ ರೆಡ್ ಕ್ರೆಸೆಂಟ್ ಸೊಸೈಟಿ (ARCS)ಗೆ ತಲುಪಿಸಲಾಗುತ್ತದೆ ಎಂದು ಎಂಇಎ ಹೇಳಿಕೆ ನೀಡಿದೆ.
ಎಲ್ಲಾ ಸಮಯದಲ್ಲೂ ಸಹ ಭಾರತವು ಆಫ್ಘಾನಿಸ್ತಾನದ ಜನರೊಂದಿಗೆ ನಿಂತಿದೆ. ಅವರೊಂದಿಗೆ ನಾವು ಶತಮಾನಗಳಷ್ಟು ಹಳೆಯ ಸಂಬಂಧವನ್ನು ಹಂಚಿಕೊಳ್ಳುತ್ತೇವೆ. ಆಫ್ಘನ್ ಜನರಿಗೆ ತಕ್ಷಣದ ಪರಿಹಾರ ನೆರವು ನೀಡಲು ದೃಢವಾಗಿ ಭಾರತ ಬದ್ಧವಾಗಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ.
ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗೆ ಹಾಗೂ ಎಲ್ಲರಿಗೂ ಸಹಾನುಭೂತಿ ಮತ್ತು ಸಂತಾಪ ವ್ಯಕ್ತಪಡಿಸುತ್ತೇವೆ. ನಾವು ಆಫ್ಘಾನಿಸ್ತಾನದ ಜನರ ದುಃಖವನ್ನು ಹಂಚಿಕೊಳ್ಳುತ್ತೇವೆ. ಈ ಅಗತ್ಯದ ಸಮಯದಲ್ಲಿ ನೆರವು ಮತ್ತು ಬೆಂಬಲವನ್ನು ನೀಡಲು ಬದ್ಧರಾಗಿದ್ದೇವೆ ಎಂದು ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.
ಕಳೆದ ಕೆಲವು ತಿಂಗಳುಗಳ ಹಿಂದೆ ತಾಲಿಬಾನ್, ಆಫ್ಘಾನ್‌ನಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ ತೀವ್ರ ಆರ್ಥಿಕ ಒತ್ತಡ ಮತ್ತು ಆಹಾರದ ಕೊರತೆಯಿಂದ ದೇಶ ತತ್ತರಿಸುತ್ತಿತ್ತು. ಆ ವೇಳೆ ಸಹ ಆಫ್ಘನ್ ಜನರಿಗೆ ಸಹಾಯ ಮಾಡಲು ಭಾರತವು, ಆಫ್ಘಾನಿಸ್ತಾನಕ್ಕೆ ಮಾನವೀಯ ನೆರವಿನ ಹಲವಾರು ಸರಕುಗಳನ್ನು ಪೂರೈಸಿತ್ತು.
ಇದನ್ನೂ ಓದಿ: Exclusive: ಬುಡಕಟ್ಟು ಜನರ ಏಳಿಗೆಗೆ ದ್ರೌಪದಿ ಮುರ್ಮು ಏನಾದರೂ ಮಾಡಿದ್ರೆ ಬಹಿರಂಗಪಡಿಸಲಿ - ಯಶವಂತ್ ಸಿನ್ಹಾ