ಭೋಪಾಲ್/ಚಂಡೀಗಢ: ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮ ಭಾರತದ ಮಾರುಕಟ್ಟೆ ಅಲುಗಾಡಿದೆ. ರಷ್ಯಾ ಮತ್ತು ಉಕ್ರೇನ್ ಎರಡರಿಂದಲೂ ಸೂರ್ಯಕಾಂತಿ ಎಣ್ಣೆಯನ್ನು ಭಾರತ ಆಮದು ಮಾಡಿಕೊಳ್ಳುತ್ತದೆ. ಇನ್ನು ಈ ಯುದ್ಧದ ಪರಿಣಾಮ ಇಂದು ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 20/30 ರೂ. ಹೆಚ್ಚಿಗೆಯಾಗಿದೆ.
ಸೂರ್ಯಕಾಂತಿ ಜತೆಗೆ ತಾಳೆ ಎಣ್ಣೆ, ಸೋಯಾಬೀನ್ ಎಣ್ಣೆ ಬೆಲೆಯಲ್ಲಿಯೂ ಏರಿಕೆಯಾಗಿದೆ. ಈ ಸಂಬಂಧ ಈಟಿವಿ ಭಾರತದ ಜೊತೆ ಮಾತನಾಡಿದ ಭೋಪಾಲ್‌ನ ದಿನಸಿ ವ್ಯಾಪಾರಿ ವಿವೇಕ್ ಸಾಹು, ಯುದ್ಧದ ಆರಂಭದಿಂದಲೂ ಖಾದ್ಯಗಳ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ವಿವಿಧ ರೀತಿಯ ತೈಲಗಳ ಬೆಲೆಗಳು ಕೆಜಿಗೆ ಸರಾಸರಿ 30 ರಿಂದ 40 ರೂ. ವರೆಗೆ ಹೆಚ್ಚಾಗಿದೆ. ಇನ್ನು ಸೂರ್ಯಕಾಂತಿ ಎಣ್ಣೆ ಸಾಗಿಸುವ ಹಡಗುಗಳು ಅಲ್ಲಿಯೇ ನಿಂತಿವೆ. ಸಾಸಿವೆ ಮತ್ತು ಇತರ ಬೀಜಗಳಲ್ಲೂ ಸಹ ಏಕೆಯಾಗಿದೆ ಎಂದು ಹೇಳಿದರು.
ಚಿಲ್ಲರೆ ಬೆಲೆಗಳ ಪ್ರಕಾರ, ಸೂರ್ಯಕಾಂತಿ ಎಣ್ಣೆಯನ್ನು ಕೆಜಿಗೆ 170 ರಿಂದ 180 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಆದರೆ ಸಾಸಿವೆ ಎಣ್ಣೆ ಮತ್ತು ಸೋಯಾಬೀನ್ ಎಣ್ಣೆ ಕೆಜಿಗೆ 200 ರೂ. ಗೆ ಮಾರಾಟವಾಗುತ್ತಿದೆ.
25 ಲಕ್ಷ ಟನ್ ಸೂರ್ಯಕಾಂತಿ ಎಣ್ಣೆಯಲ್ಲಿ ಭಾರತವು ಪ್ರತಿ ವರ್ಷ ಸುಮಾರು 17 ಲಕ್ಷ ಟನ್‌ಗಳನ್ನು ಉಕ್ರೇನ್‌ನಿಂದ ಆಮದು ಮಾಡಿಕೊಳ್ಳುತ್ತಿದ್ದರೆ, 2 ಲಕ್ಷ ಟನ್‌ಗಳನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತದೆ.