ನವದೆಹಲಿ: ದೇಶದ ಅತಿದೊಡ್ಡ ಹಬ್ಬಗಳಲ್ಲಿ ಒಂದಾಗ ದೀಪಾವಳಿಗೆ ದಿನಗಣನೆ ಶುರುವಾಗಿದೆ. ದೀಪಗಳ ಹಬ್ಬಕ್ಕೂ ಮುನ್ನ ಬರುವ ಧನತೆರಸ್ ಅಥವಾ ಧನತ್ರಯೋದಶಿ ಕೂಡ ಹಿಂದೂಗಳ ಪಾಲಿಗೆ ಮಹತ್ವ ಪಡೆದುಕೊಂಡಿದೆ. ಶುಕ್ರವಾರವಾದ ಇಂದು ಎಲ್ಲೆಡೆ ಧನತ್ರಯೋದಶಿ ಆಚರಿಸಲಾಗುತ್ತಿದೆ. ಇದರೊಂದಿಗೆ ಚಿನ್ನ ಹಾಗೂ ಬೆಳ್ಳಿ ಆಭರಣಗಳಿಗೂ ಬೇಡಿಕೆ ಹೆಚ್ಚಾಗಿದೆ.
ಧನತ್ರಯೋದಶಿ ಆಚರಣೆ ವಿಶೇಷ: ದೇಶದಾದ್ಯಂತ ಧನತೆರಸ್ ಹಬ್ಬವನ್ನೂ ಅಪಾರ ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ದಿನ ಸಿದ್ಧಿ ವಿನಾಯಕ ಗಣೇಶ, ಸಂಪತ್ತಿನ ಅಧಿದೇವತೆಗಳಾದ ಮಹಾಲಕ್ಷ್ಮೀ, ಧನ್ವಂತರಿ, ಕುಬೇರರನ್ನು ವಿಶೇಷವಾಗಿ ಆರಾಧಿಸಲಾಗುತ್ತದೆ. ಈ ದಿನವನ್ನು ಹೊಸ ವಸ್ತುಗಳ ಖರೀದಿಗಳಿಗೆ ಮಂಗಳಕರ ಎಂದೇ ಜನತೆಯ ನಂಬಿಕೆಯಾಗಿದೆ. ಚಿನ್ನ, ಬೆಳ್ಳಿ ಆಭರಣಗಳು, ಪಾತ್ರೆಗಳು, ಅಡುಗೆ ಸಾಮಗ್ರಿ, ವಾಹನ, ಎಲೆಕ್ಟ್ರಾನಿಕ್ಸ್ ವಸ್ತುಗಳು ಹಾಗೂ ಬಟ್ಟೆ ಹೆಚ್ಚಾಗಿ ಖರೀದಿ ಮಾಡಲಾಗುತ್ತದೆ. ಗಮನಾರ್ಹ ಸಂಗತಿ ಎಂದರೆ, ಪೊರಕೆಗಳ ಖರೀದಿ ಕೂಡ ಮಂಗಳಕರವೆಂದೇ ಪರಿಗಣಿಸಲಾಗುತ್ತದೆ.
ಚಿನ್ನದ ಬೆಲೆ ತಗ್ಗಿದ ಖುಷಿ: ಭಾರತವು ವಿಶ್ವದ ಅತಿದೊಡ್ಡ ಚಿನ್ನದ ಗ್ರಾಹಕರನ್ನು ಹೊಂದಿದೆ. ದೀಪಾವಳಿ ಪೂರ್ವದ ಧನತ್ರಯೋದಶಿಯೂ ಸಹ ಪ್ರತಿ ವರ್ಷ ಉತ್ತಮ ಚಿನ್ನ ಹಾಗೂ ಬೆಳ್ಳಿ ಖರೀದಿಗೆ ಸಾಕ್ಷಿಯಾಗುತ್ತದೆ. ಈ ವರ್ಷ ಸಹ ಎರಡೂ ಲೋಹಗಳ ಮಾರಾಟ ಚುರುಕು ಪಡೆದಿದೆ. ಆಭರಣಗಳ ಪ್ರಿಯರಿಗೆ ಖುಷಿಯ ಸಂಗತಿ ಎಂದರೆ ಚಿನ್ನದ ಬೆಲೆಗಳು ಕೆಲ ದಿನಗಳಿಂದ ಕುಸಿತ ಕಂಡಿದೆ. ಅಕ್ಟೋಬರ್ 28ರಂದು 63,000 ರೂಪಾಯಿಗಳ ಗರಿಷ್ಠ ಮಟ್ಟದಿಂದ 10 ಗ್ರಾಂಗೆ (24 ಕ್ಯಾರೆಟ್) 800ರಿಂದ 1,500 ರೂಪಾಯಿಗಳಷ್ಟು ಚಿನ್ನದ ಬೆಲೆ ಕುಸಿದಿದೆ.
ಇದರ ನಡುವೆ ಹಿಂದೂ ಕ್ಯಾಲೆಂಡರ್ ಪ್ರಕಾರ, ಇಂದು ಧನತೆರಸ್ ಆಚರಿಸಲಾಗುತ್ತಿದೆ. ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ಖರೀದಿಸಲು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಿರುವುದರಿಂದ ಗ್ರಾಹಕರಿಂದಲೂ ಬೇಡಿಕೆ ಹೆಚ್ಚಾಗಿದೆ. ಚಿನ್ನದ ಮಾರಾಟವು ಕಳೆದ ವರ್ಷದ ಮಟ್ಟವನ್ನು ಮೀರಿಸಬಹುದೆಂದು ವ್ಯಾಪಾರಿಗಳು ನಿರೀಕ್ಷಿಸುತ್ತಿದ್ದಾರೆ. ಇತರ ಗೃಹೋಪಯೋಗಿ ವಸ್ತುಗಳ ಮಾರಾಟ ಕೂಡ ಹೆಚ್ಚಾಗಬಹುದು ಎಂಬ ಲೆಕ್ಕಾಚಾರದಲ್ಲಿ ವ್ಯಾಪಾರಿಗಳು ತೊಡಗಿದ್ದಾರೆ.
ನಿನ್ನೆ, ಗುರುವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 400 ರೂ. ಕುಸಿದಿದ್ದು, ಗರಿಷ್ಠ 60,950 ರೂ.ಗೆ ಮಾರಾಟ ಆಗಿದೆ. ದೆಹಲಿಯಲ್ಲಿ 2022ರ ಧನತೇರಸ್ ದಿನದಂದು ತೆರಿಗೆಗಳನ್ನು ಹೊರತುಪಡಿಸಿ ಪ್ರತಿ ಹತ್ತು ಗ್ರಾಂ ಚಿನ್ನದ ಬೆಲೆ 50,139 ರೂ. ಇತ್ತು. ಸಾಮಾನ್ಯ ವರ್ಷಗಳಲ್ಲಿ ಧನತೆರಸ್ ದಿನದಂದು ಸುಮಾರು 20-30 ಟನ್ ಚಿನ್ನವನ್ನು ಮಾರಾಟ ಮಾಡಲಾಗುತ್ತದೆ. ಇಂದು ಮಧ್ಯಾಹ್ನ ಖರೀದಿದಾರರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದ್ದು, ಇದು ತಡರಾತ್ರಿಯವರೆಗೆ ಮುಂದುವರಿಯಲಿದೆ ಎನ್ನುತ್ತಾರೆ ವ್ಯಾಪಾರಿಗಳು.
ಯಾವುದು ಉತ್ತಮ ಮುಹೂರ್ತ?: ಇಂದು ಧನತೆರಸ್ ಪ್ರಯುಕ್ತ ಬೆಳ್ಳಿ ಮತ್ತು ಚಿನ್ನ ಖರೀದಿಸಲು ಉತ್ತಮ ಮುಹೂರ್ತವು ಮಧ್ಯಾಹ್ನ 12.35ಕ್ಕೆ ಪ್ರಾರಂಭವಾಗಿದೆ. ಪಂಚಾಂಗದ ಪ್ರಕಾರ, ನಾಳೆ, ನವೆಂಬರ್ 11ರಂದು ಮಧ್ಯಾಹ್ನ 1.57ಕ್ಕೆ ಇದು ಕೊನೆಗೊಳ್ಳುತ್ತದೆ. ''ಪ್ರಸ್ತುತ ಚಿನ್ನದ ಬೆಲೆಗಳು ವ್ಯಾಪಾರದ ಪರವಾಗಿವೆ. ನಾವು ಇಂದು ಉತ್ತಮ ಮಾರಾಟದ ಬಗ್ಗೆ ಸಕಾರಾತ್ಮಕ ಭಾವನೆ ಹೊಂದಿದ್ದೇವೆ. ಗ್ರಾಹಕರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಪಡೆಯುತ್ತಿದ್ದೇವೆ. ಇದು ಕ್ರಮೇಣ ಹೆಚ್ಚಾಗುವ ನಿರೀಕ್ಷೆ ಇದೆ'' ಎಂದು ಅಖಿಲ ಭಾರತ ಜೆಮ್ ಮತ್ತು ಜ್ಯುವೆಲ್ಲರಿ ಡೊಮೆಸ್ಟಿಕ್ ಕೌನ್ಸಿಲ್ (ಜಿಜೆಸಿ) ನಿರ್ದೇಶಕ ದಿನೇಶ್ ಜೈನ್ ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ''ವಜ್ರದ ಬೆಲೆ ಕುಸಿತದಿಂದ ಯುವಪೀಳಿಗೆ ಕಡಿಮೆ ತೂಕದ ಆಭರಣಗಳನ್ನು ಖರೀದಿಸುತ್ತಿದೆ. ಕೆಲವರು ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಖರೀದಿಸುತ್ತಿದ್ದಾರೆ. ಸರಿಯಾದ ಮಾರಾಟದ ಚಿತ್ರಣ ಸಂಜೆ ತಿಳಿಯುತ್ತದೆ'' ಎಂದರು.
ಇದನ್ನೂ ಓದಿ: ದೀಪಾವಳಿ: ಕೈದಿಗಳಿಂದ ರುಚಿರುಚಿಯಾದ ಸಿಹಿತಿಂಡಿ ತಯಾರಿ, ಮಾರಾಟ- ವಿಡಿಯೋ