ಚೆನ್ನೈ(ತಮಿಳುನಾಡು) : ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತೆ ಚೀನಾ ವಿರುದ್ಧ ಗುಡುಗಿದ್ದಾರೆ. ಉತ್ತರದ ಗಡಿಯಲ್ಲಿ ದೊಡ್ಡ ಪ್ರಮಾಣದ ಪಡೆಗಳನ್ನು ನಿಯೋಜಿಸುವ ಮೂಲಕ ಚೀನಾ ಗಡಿ ನಿಯಮಗಳನ್ನು ಉಲ್ಲಂಘಿಸುತ್ತಿದೆ. ಗಡಿಯಲ್ಲಿರುವ ಯಥಾಸ್ಥಿತಿ ಪರಿಸ್ಥಿತಿಯನ್ನು ಬದಲಾಯಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ಕೊರೊನಾ ಹೊರತಾಗಿಯೂ ನಮ್ಮ ಪ್ರತೀಕಾರದ ಪ್ರತಿಕ್ರಿಯೆ ಪ್ರಬಲ ಮತ್ತು ದೃಢವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ನಿಯೋಜಿಸಲಾಗಿರುವ ನಮ್ಮ ಸೈನಿಕರು ಕಠಿಣ ಭೂಪ್ರದೇಶಗಳಲ್ಲಿ ಗಡಿಗಳನ್ನು ಕಾಪಾಡುತ್ತಿದ್ದಾರೆ. ಇದೀಗ ಇನ್ನೂ ಹೆಚ್ಚಿನ ಸನ್ನದ್ಧತೆಯಿಂದ ಯಾವುದೇ ಪರಿಸ್ಥಿತಿ ಎದುರಿಸಲು ರೆಡಿಯಾಗಿದ್ದಾರೆ ಎಂದರು.
ಶನಿವಾರ ಸಂಜೆ ಚೆನ್ನೈನಲ್ಲಿ ತುಘಲಕ್ ಪತ್ರಿಕೆಯ 53ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವರು ಹಲವು ವಿಷಯಗಳ ಬಗ್ಗೆ ಮಾತನಾಡಿದರು. ಭಾರತದ ಆರ್ಥಿಕ ಸ್ಥಿತಿ, ವಿದೇಶಾಂಗ ನೀತಿ, ದೇಶವು ಕೊರೊನಾ ಸಾಂಕ್ರಾಮಿಕ ಎದುರಿಸಿದ ಬಗೆ, ಅಭಿವೃದ್ಧಿಶೀಲ ರಾಷ್ಟ್ರಗಳೊಂದಿಗೆ ಸಹಕಾರ ಮತ್ತು ವಾಸ್ತವ ಗಡಿ ರೇಖೆ ಮೇಲೆ ಚೀನಾದ ಅತಿಕ್ರಮಣವನ್ನು ಭಾರತ ಹೇಗೆ ಎದುರಿಸುತ್ತಿದೆ ಎಂಬುದರ ಕುರಿತು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು.
'ಭಾರತವು ಎಲ್ಲಾ ಸವಾಲುಗಳನ್ನು ದೃಢವಾಗಿ ಎದುರಿಸುತ್ತದೆ': ಪಾಕಿಸ್ತಾನದಿಂದ ಹೊರಹೊಮ್ಮುತ್ತಿರುವ ಭಯೋತ್ಪಾದನೆ ಮತ್ತು ಚೀನಾದೊಂದಿಗಿನ ಆಕ್ರಮಣಕಾರಿ ಗಡಿಯಾಚೆಗಿನ ಕದನಗಳಿಗೆ ಭಾರತ ತಕ್ಕ ಪ್ರತಿಕ್ರಿಯೆ ನೀಡುತ್ತಿದೆ. ದೇಶವು ಯಾರ ಒತ್ತಡಕ್ಕೂ ಮಣಿಯುವುದಿಲ್ಲ ಎಂಬುದನ್ನು ತೋರಿಸಿದೆ. ದೇಶವು ತನ್ನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳುತ್ತಿದೆ. ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ವಾಯುಪಡೆಯ ಬಾಲಾಕೋಟ್ ವೈಮಾನಿಕ ದಾಳಿಯು ಅಗತ್ಯ ಸಂದೇಶ ರವಾನಿಸಿದೆ ಎಂದು ಹೇಳಿದರು.
1947ರಲ್ಲಿ ದೇಶ ವಿಭಜನೆಯಾಗದೇ ಇದ್ದಿದ್ದರೆ ಭಾರತ ವಿಶ್ವದಲ್ಲೇ ದೊಡ್ಡ ರಾಷ್ಟ್ರವಾಗುತ್ತಿತ್ತು. ಆಗ ಚೀನಾ ಯಾವಾಗಲೂ ಹಿಂದೆ ಇರುತ್ತಿತ್ತು. ವಿದೇಶಾಂಗ ಸಚಿವರು ಇದನ್ನೆಲ್ಲಾ ಏಕೆ ಮಾತನಾಡುತ್ತಿದ್ದಾರೆ ಎಂದು ನಿಮಗೆ ಆಶ್ಚರ್ಯವಾಗಬಹುದು. ನನ್ನ ವಿದೇಶ ಪ್ರವಾಸದ ಸಮಯದಲ್ಲಿ ಅನೇಕ ಅಭಿವೃದ್ಧಿ ಹೊಂದಿದ ದೇಶಗಳಿಗೆ ನಮ್ಮ ಕೋವಿಡ್ ಲಸಿಕೆಗಳು ಮತ್ತು ನಮ್ಮ ತಂತ್ರಜ್ಞಾನ-ಶಕ್ತಗೊಂಡ ಆಡಳಿತದ ಬಗ್ಗೆ ನಾನು ಸಾಕಷ್ಟು ಮೆಚ್ಚುಗೆಗಳನ್ನು ಕೇಳಿದ್ದೇನೆ ಎಂದರು.
‘ಅತಿದೊಡ್ಡ ಆರ್ಥಿಕತೆಯತ್ತ ಭಾರತ ದಾಪುಗಾಲು': ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ. 2030ರ ವೇಳೆಗೆ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಆರ್ಥಿಕ ವಿಚಾರದಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಕಾಣುತ್ತಿದೆ. ಪ್ರಸ್ತುತ, ದೇಶವು ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಈ ದಶಕದ ಅಂತ್ಯ ಅಥವಾ ಶೀಘ್ರದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ತಿಳಿಸಿದರು.
‘ಪ್ರಭಾವಿ ಧ್ವನಿಯಾಗಿ ಹೊರಹೊಮ್ಮುತ್ತಿದೆ ಭಾರತ': ಭಾರತ ಜಾಗತಿಕವಾಗಿ ಪ್ರಭಾವಿ ಧ್ವನಿಯಾಗಿ ಹೊರಹೊಮ್ಮುತ್ತಿದೆ. ನಮ್ಮ ಆಲೋಚನೆಗಳು ಮತ್ತು ಉಪಕ್ರಮಗಳಿಗೆ ಪ್ರಪಂಚದಾದ್ಯಂತ ಪ್ರಾಮುಖ್ಯತೆ ಸಿಗುತ್ತಿದೆ. ಭಾರತದ ಆಜ್ಞೆಯ ಮೇರೆಗೆ ವಿಶ್ವಸಂಸ್ಥೆಯು 2023 ಅನ್ನು ಅಂತಾರಾಷ್ಟ್ರೀಯ ರಾಗಿ ವರ್ಷ ಎಂದು ಘೋಷಿಸಿದ ಸಂಗತಿಯಿಂದಲೂ ಇದು ತಿಳಿದು ಬರುತ್ತದೆ ಎಂದರು.
ಇದನ್ನೂ ಓದಿ: ಪಾಕ್ ಗಡಿಯಲ್ಲಿ ಡ್ರೋನ್ ಹೊಡೆದುರುಳಿಸಿ 30 ಕೋಟಿ ಮೌಲ್ಯದ ಹೆರಾಯಿನ್ ಜಪ್ತಿ