ನವದೆಹಲಿ : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 7,447 ಮಂದಿ ಹೊಸ ಕೋವಿಡ್ ಸೋಂಕಿತರು ಪತ್ತೆಯಾಗಿದ್ದಾರೆ. 391 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ದೇಶದಲ್ಲಿ ಸದ್ಯಕ್ಕೆ ಒಟ್ಟು 86,415 ಸಕ್ರಿಯ ಪ್ರಕರಣಗಳಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬರುತ್ತಿದೆ. ಶೇಕಡಾ ದರ 0.25 ರಷ್ಟಿದೆ. ಜೊತೆಗೆ ನಿನ್ನೆ 391 ಮಂದಿ ಸೋಂಕಿಗೆ ಬಲಿಯಾಗಿದ್ದು, ಈ ಮೂಲಕ ದೇಶದಲ್ಲಿ ಸಾವಿನ ಸಂಖ್ಯೆ 4,76,869 ಕ್ಕೆ ಏರಿಕೆಯಾಗಿದೆ.
ಕಳೆದ ಒಂದುವರೆ ತಿಂಗಳಿಂದ ಹೊಸ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು 15,000ಕ್ಕಿಂತ ಕಡಿಮೆ ಕಂಡು ಬರುತ್ತಿವೆ. ಕಳೆದ 24 ಗಂಟೆಗಳಲ್ಲಿ 7,886 ಜನರು ವೈರಸ್ನಿಂದ ಚೇತರಿಸಿಕೊಂಡಿದ್ದಾರೆ. ಈವರೆಗೆ ದೇಶದಲ್ಲಿ ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆ 3,41,62,765ಕ್ಕೆ ಏರಿಕೆಯಾಗಿದೆ.
ಜನವರಿ 16ರಿಂದ ದೇಶಾದ್ಯಂತ ಕೊರೊನಾ ಲಸಿಕಾ ಅಭಿಯಾನ ಆರಂಭಿಸಲಾಗಿದೆ. ಈವರೆಗೆ 1,35,99,96,267ಕ್ಕೂ ಅಧಿಕ ಡೋಸ್ ವ್ಯಾಕ್ಸಿನ್ ನೀಡಲಾಗಿದೆ.
Omicron cases in India : ದೇಶದಲ್ಲಿ ಕೋವಿಡ್ ರೂಪಾಂತರಿ ತಳಿ ಒಮಿಕ್ರಾನ್ ಆತಂಕ ಮೂಡಿಸಿದೆ. ಈಗಾಗಲೇ ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಕರ್ನಾಟಕ, ಕೇರಳ, ನವದೆಹಲಿ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಕೊರೊನಾ ರೂಪಾಂತರಿ ಒಮಿಕ್ರಾನ್ ಪ್ರಕರಣ ದೃಢಪಟ್ಟಿವೆ.
ಭಾರತದಲ್ಲಿ ಗುರುವಾರ 14 ಹೊಸ ಒಮಿಕ್ರಾನ್ ಪ್ರಕರಣ ವರದಿಯಾಗಿವೆ. ಈ ಮೂಲಕ ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 87ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಐದು, ದೆಹಲಿ ಮತ್ತು ತೆಲಂಗಾಣದಲ್ಲಿ ತಲಾ ನಾಲ್ಕು ಮತ್ತು ಗುಜರಾತ್ನಲ್ಲಿ ಒಂದು ಪ್ರಕರಣ ವರದಿಯಾಗಿವೆ.