ನವದೆಹಲಿ: ಭಾರತದಲ್ಲಿ ಕೋವಿಡ್ ಮೃತರ ಸಂಖ್ಯೆ 1,54,996ಕ್ಕೆ ಏರಿಕೆಯಾಗಿದ್ದರೂ ಸಹ ಇತರ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ ಕಡಿಮೆಯಿದೆ. ಕೆಲ ತಿಂಗಳ ಹಿಂದೆ ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ಸೋಂಕಿತರು ಪ್ರಾಣ ಕಳೆದುಕೊಳ್ಳುತ್ತಿದ್ದರು. ಕ್ರಮೇಣ ಈ ಸಂಖ್ಯೆ ಇಳಿಕೆಯಾಗುತ್ತಾ ಬಂದಿದ್ದು, ಶನಿವಾರ ಅತಿ ಕಡಿಮೆ ಅಂದರೆ 78 ಸಾವು ವರದಿಯಾಗಿದೆ.
ಕಳೆದ 24 ಗಂಟೆಗಳಲ್ಲಿ 12,059 ಕೇಸ್ಗಳು ಪತ್ತೆಯಾಗಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 1,08,26,363ಕ್ಕೆ ಏರಿಕೆಯಾಗಿದೆ. ಆದರೆ ಈ ಪೈಕಿ 1,05,22,601 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದು, 1,48,766 ಪ್ರಕರಣಗಳು ಮಾತ್ರ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಜನವರಿ 16ರಿಂದ ನಿನ್ನೆಯವರೆಗೆ ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್ ವಿರುದ್ಧದ ಹೋರಾಟದಲ್ಲಿರುವ ಮುಂಚೂಣಿ ಕಾರ್ಮಿಕರು ಸೇರಿ 57,75,322 ಮಂದಿಗೆ ಲಸಿಕೆ ನೀಡಲಾಗಿದೆ.
ಫೆಬ್ರವರಿ 6ರ ವರೆಗೆ 20 ಕೋಟಿಗೂ ಹೆಚ್ಚು (20,13,68,378) ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 6,95,789 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.