ನವದೆಹಲಿ: 2021ರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತವು 191 ದೇಶಗಳ ಪೈಕಿ 132ನೇ ಸ್ಥಾನದಲ್ಲಿದೆ ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಯುಎನ್‌ಡಿಪಿ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ. ಭಾರತದ ಎಚ್‌ಡಿಐ ಮೌಲ್ಯವು 0.633 ಇದ್ದು, ಇದು ಭಾರತ ಮಧ್ಯಮ ಮಾನವ ಅಭಿವೃದ್ಧಿ ವಿಭಾಗದಲ್ಲಿದೆ ಎಂಬುದನ್ನು ತೋರಿಸುತ್ತಿದೆ.
2020 ರ ವರದಿಯಲ್ಲಿ ಭಾರತದ ಮೌಲ್ಯ 0.645ರಷ್ಟಿತ್ತು . 2020 ರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತವು 189 ದೇಶಗಳಲ್ಲಿ 131 ನೇ ಸ್ಥಾನ ಪಡೆದುಕೊಂಡಿತ್ತು. ಜಾಗತಿಕ ಪ್ರವೃತ್ತಿಗಳಂತೆಯೇ, ಭಾರತದ ವಿಷಯದಲ್ಲಿ 2019 ರಲ್ಲಿ 0.645 ಇದ್ದ ಮೌಲ್ಯ 2021 ರಲ್ಲಿ 0.633 ಕ್ಕೆ ಎಚ್‌ಡಿಐ ಕುಸಿತ ಕಂಡಿದೆ. ಅಂದರೆ - 69.7 ರಿಂದ 67.2 ವರ್ಷಕ್ಕೆ ಕುಸಿತ ಕಂಡಿದೆ.
ಮಾನವ ಅಭಿವೃದ್ಧಿ - ಒಂದು ರಾಷ್ಟ್ರದ ಆರೋಗ್ಯ, ಶಿಕ್ಷಣ ಮತ್ತು ಸರಾಸರಿ ಆದಾಯದ ಅಳತೆಯು ಕೊರೊನಾದಿಂದಾಗಿ ಐದು ವರ್ಷಗಳ ಪ್ರಗತಿಯನ್ನು ಕುಂಟಿತಗೊಳಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ವಿಶ್ವದಾದ್ಯಂತ ಮಾನವ ಅಭಿವೃದ್ಧಿಯು 32 ವರ್ಷಗಳಲ್ಲಿ ಮೊದಲ ಬಾರಿಗೆ ಸ್ಥಗಿತಗೊಂಡಿದೆ ಎಂದು ವರದಿಯಲ್ಲಿ ತೋರಿಸಲಾಗಿದೆ. 2019 ರಲ್ಲಿ 72.8 ವರ್ಷಗಳಿದ್ದ ಜೀವಿತಾವಧಿ 2021 ರಲ್ಲಿ 71.4 ವರ್ಷಗಳಿಗೆ ಕಡಿತಗೊಂಡಿದೆ.
ವಿಶ್ವ ಒಂದರ ಹಿಂದೊಂದರಂತೆ ಬಿಕ್ಕಟ್ಟುಗಳಿಗೆ ಈಡಾಗುತ್ತಿದೆ. ಈ ಹೊಡೆತದಿಂದ ಮೇಲೆಳಲು ಪರದಾಡುತ್ತಿದೆ. ಜೀವನ ವೆಚ್ಚ ಮತ್ತು ಇಂಧನ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ ಎಂದು ಯುಎನ್‌ಡಿಪಿಯ ನಿರ್ವಾಹಕರಾದ ಅಚಿಮ್ ಸ್ಟೈನರ್ ಹೇಳಿದ್ದಾರೆ.
ಜಾಗತಿಕ ಬಿಕ್ಕಟ್ಟುಗಳು ಹಾಗೂ ಕೊರೊನಾ ಭಾರತದ ಅಭಿವೃದ್ಧಿ ಪಥದ ಮೇಲೆ ಪ್ರಭಾವ ಬೀರಿವೆ. ಅವುಗಳು ಪ್ರಪಂಚದ ಹೆಚ್ಚಿನ ಭಾಗಗಳಲ್ಲಿರುವಂತೆಯೇ ಭಾರತದಲ್ಲೂ ಆಗಿವೆ.
ಏನಿದು ಎಚ್‌ಡಿಐ ಸೂಚ್ಯಂಕ: ಮಾನವ ಅಭಿವೃದ್ಧಿಯು 3 ಪ್ರಮುಖ ಆಯಾಮಗಳಲ್ಲಿ ಅಳೆಯಲಾಗುತ್ತದೆ. ದೀರ್ಘ ಮತ್ತು ಆರೋಗ್ಯಕರ ಜೀವನ, ಶಿಕ್ಷಣದ ಪ್ರವೇಶ ಮತ್ತು ಯೋಗ್ಯ ಜೀವನ ಮಟ್ಟ ಆಧರಿಸಿ ಈ ಸೂಚ್ಯಂಕ ತಯಾರಿಸಲಾಗುತ್ತದೆ. ಜೀವಿತಾವಧಿ, ಸರಾಸರಿ ಶಾಲಾ ವರ್ಷಗಳು, ಶಾಲಾ ಶಿಕ್ಷಣದ ನಿರೀಕ್ಷಿತ ವರ್ಷಗಳು ಮತ್ತು ತಲಾವಾರು ಒಟ್ಟು ರಾಷ್ಟ್ರೀಯ ಆದಾಯ (GNI) ಹೀಗೆ ನಾಲ್ಕು ಸೂಚಕಗಳನ್ನು ಬಳಸಿಕೊಂಡು ಸೂಚ್ಯಂಕವನ್ನು ಲೆಕ್ಕಹಾಕಲಾಗುತ್ತದೆ.
ಮಾನವ ಅಭಿವೃದ್ಧಿ ವರದಿ ಪ್ರಕಾರ ಜಾಗತಿಕವಾಗಿ ಪ್ರಗತಿಯು ಹಿಮ್ಮುಖವಾಗಿ ಚಲಿಸುತ್ತಿರುವುದು ತೋರಿಸುತ್ತಿದೆ. ಜಾಗತಿಕ ವಿದ್ಯಮಾನಗಳು ಭಾರತದ ಪ್ರಗತಿ ಮೇಲೆ ಪ್ರಭಾವ ಬೀರಿದೆ. ಆದರೂ ಒಳ್ಳೆಯ ಸುದ್ದಿ ಇದೆ. 2019ಕ್ಕೆ ಹೋಲಿಸಿದರೆ, ಮಾನವ ಅಭಿವೃದ್ಧಿಯ ಮೇಲೆ ಅಸಮಾನತೆಯ ಪ್ರಭಾವ ಕಡಿಮೆಯಾಗಿದೆ ಎಂ ಎಂದು ಭಾರತದಲ್ಲಿನ ಯುಎನ್‌ಡಿಪಿ ಪ್ರತಿನಿಧಿ ಶೋಕೊ ನೋಡಾ ಭರವಸೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ:ಹೊಸ ಪ್ರಧಾನಿ ಲಿಜ್ ಟ್ರಸ್ಗೆ ಬ್ರಿಟನ್ ರಾಣಿಯಿಂದ ಅಧಿಕಾರ ಹಸ್ತಾಂತರ