ನವದೆಹಲಿ: ಪರೋಕ್ಷವಾಗಿ ಚೀನಾ ಹಾಗೂ ಪಾಕಿಸ್ತಾನದ ಕಾಲೆಳೆದಿರುವ ಪ್ರಧಾನಿ ನರೇಂದ್ರ ಮೋದಿ, ಸರ್ವಾಧಿಕಾರ ಮತ್ತು ಹಿಂಸಾತ್ಮಕ ಭಯೋತ್ಪಾದನೆಯಂತಹ ಬೆದರಿಕೆಗಳಿಂದ ಪ್ರಜಾಪ್ರಭುತ್ವ, ಸ್ವಾತಂತ್ರ್ಯವನ್ನು ರಕ್ಷಿಸುವಲ್ಲಿ ಜಿ7 ರಾಷ್ಟ್ರಗಳಿಗೆ ಭಾರತ ಎಂದಿಗೂ ಆಪ್ತನಾಗಿರುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯುಕೆ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಯುನೈಟೆಡ್ ಸ್ಟೇಟ್ಸ್ - ಈ ಏಳು ದೇಶಗಳ ನಡುವೆ ಪ್ರತಿವರ್ಷ ಜಿ-7 ಶೃಂಗಸಭೆ ನಡೆಯುತ್ತದೆ. ಈ ಬಾರಿ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ನೇತೃತ್ವದಲ್ಲಿ ಮೂರು ದಿನಗಳ ಕಾಲ ನಡೆದ ಜಿ-7 ಶೃಂಗಸಭೆ ನಡೆದಿದ್ದು, ಭಾರತ, ಆಸ್ಟ್ರೇಲಿಯಾ, ಕೊರಿಯಾ ಗಣತಂತ್ರ ಮತ್ತು ದಕ್ಷಿಣ ಆಫ್ರಿಕಾಗಳನ್ನು ಜಿ-7 ಶೃಂಗಕ್ಕೆ ಅತಿಥಿ ರಾಷ್ಟ್ರಗಳನ್ನಾಗಿ ಆಹ್ವಾನಿಸಲಾಗಿತ್ತು.
ಇದನ್ನೂ ಓದಿ: 'ಒಂದು ಭೂಮಿ, ಒಂದು ಆರೋಗ್ಯ' ಮಂತ್ರ: ಜಿ-7 ಶೃಂಗಸಭೆಯಲ್ಲಿ ಪ್ರಧಾನಿ ಕರೆ
ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪಿಎಂ ಮೋದಿ, ಮುಕ್ತ ಮತ್ತು ಪ್ರಜಾಪ್ರಭುತ್ವ ಸಮಾಜಗಳು ಒಟ್ಟಾಗಿ ಕೆಲಸ ಮಾಡಿ, ಭಯೋತ್ಪಾದನೆ, ಸರ್ವಾಧಿಕಾರದ ವಿರುದ್ಧ ಪರಸ್ಪರರ ಕೈ ಜೋಡಿಸುವ ಅಗತ್ಯತೆಯ ಬಗ್ಗೆ ದನಿ ಎತ್ತಿದ್ದಾರೆ.
ಸರ್ವಾಧಿಕಾರ, ಭಯೋತ್ಪಾದನೆ, ಹಿಂಸಾತ್ಮಕ ಉಗ್ರಗಾಮಿತ್ವ ಮತ್ತು ಆರ್ಥಿಕ ಬಲಾತ್ಕಾರದಿಂದ ಉಂಟಾಗುವ ಬೆದರಿಕೆಗಳಿಂದ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಆಲೋಚನಾ ಸ್ವಾತಂತ್ರ್ಯವನ್ನು ರಕ್ಷಿಸಲು ಜಿ7 ದೇಶಗಳು ಹಾಗೂ ಅದರ ಪಾಲುದಾರರಿಗೆ ಭಾರತ ಸ್ವಾಭಾವಿಕ ಮಿತ್ರ ಎಂದು ಒತ್ತಿ ಹೇಳಿದ್ದಾರೆ. ಈ ಮೂಲಕ ಪಾಕ್-ಚೀನಾ ಕಾಲೆಳೆದದ್ದಲ್ಲದೇ ಜಿ7 ದೇಶಗಳೊಂದಿಗಿನ ಸ್ನೇಹ ಗಟ್ಟಿ ಮಾಡಿಕೊಳ್ಳಲು ಹೊರಟಿದ್ದಾರೆ.