ಬಂಕುರಾ(ಪಶ್ಚಿಮ ಬಂಗಾಳ): 2023ರ ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದೆದುರು ಭಾರತದ ಸೋಲಿನ ನೋವಿನಲ್ಲಿ ನೊಂದು ದೇಶದ ಪ್ರತ್ಯೇಕ ಕಡೆಗಳಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಬೆಲಿಯಟೋರ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ರಾಹುಲ್ ಲೋಹರ್ (23) ಮತ್ತು ಒಡಿಶಾದ ಜಾಜ್‌ಪುರ ಜಿಲ್ಲೆ ಬಿಂಜರ್‌ಪುರ ಪ್ರದೇಶದ ನಿವಾಸಿ ದೇವ ರಂಜನ್ ದಾಸ್ (23) ಸಾವಿಗೆ ಶರಣಾದವರು.
ನವೆಂಬರ್ 19 (ಭಾನುವಾರ) ಗುಜರಾತ್ನ ಅಹಮದಾಬದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿಯಾಗಿದ್ದವು. ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿತ್ತು. ಈ ಫಲಿತಾಂಶದಿಂದ ಮನನೊಂದ ರಾಹುಲ್ ತನ್ನ ಮನೆ ಕೊಠಡಿಯೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವು ಗಂಟೆಗಳಷ್ಟು ಸಮಯ ಕೊಠಡಿಯಿಂದ ಹೊರಬರದೇ ಇದ್ದುದರಿಂದ ಬಾಗಿಲು ತೆರೆದಾಗ ನೋಡಿದಾಗ ಘಟನೆ ಬೆಳಗಿದೆ ಬಂದಿದೆ ಎಂದು ಮೃತನ ಸೋದರಮಾವ ಉತ್ತಮ ಸುರ್ ಹೇಳಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೋಮವಾರ ಬೆಳಿಗ್ಗೆ ಬಂಕುರಾ ಸಮ್ಮಿಲಾನಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತ್ತೊಂದೆಡೆ, ಭಾನುವಾರ ರಾತ್ರಿ ಒಡಿಶಾದ ಜಾಜ್‌ಪುರ ಜಿಲ್ಲೆಯ ಬಿಂಜರ್‌ಪುರ ಪ್ರದೇಶದ ಮನೆಯ ಟೆರೇಸ್ ಮೇಲೆ ಯುವಕನೊಬ್ಬನ ಮೃತದೇಹ ಪತ್ತೆಯಾಗಿದೆ. ಫೈನಲ್‌ನಲ್ಲಿ ಭಾರತ ಸೋತ ನಂತರ ದೇವ ರಂಜನ್ ದಾಸ್ ಎಂಬ ಯುವಕ ಹತಾಶೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ. ಕೆಲದಿನಗಳಿಂದ ದೇವ ರಂಜನ್ ದಾಸ್ ಭಾವನಾತ್ಮಕ ಅಸ್ವಸ್ಥತೆಯ ಸಿಂಡ್ರೋಮ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪೊಲೀಸರಿಗೆ ಮೃತನ ಚಿಕ್ಕಪ್ಪ ಮಾಹಿತಿ ನೀಡಿದ್ದಾರೆ.
ನಾವು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿದ್ದೇವೆ. ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಜರಿ ಔಟ್‌ಪೋಸ್ಟ್‌ನ ಪ್ರಭಾರಿ ಅಧಿಕಾರಿ ಇಂದ್ರಮಣಿ ಜುವಾಂಗಾ ಹೇಳಿದರು.
ಕೋಟ್ಯಂತರ ಭಾರತೀಯರಿಗೆ ನಿರಾಶೆ: ಈ ಬಾರಿ ದೇಶದ ಕ್ರಿಕೆಟ್ ಅಭಿಮಾನಿಗಳು 10 ವರ್ಷದ ಐಸಿಸಿ ಟ್ರೋಫಿಯ ಬರ ನೀಗುತ್ತದೆ ಎಂದೇ ಭಾವಿಸಿದ್ದರು. ಗೆಲುವಿನ ಕ್ಷಣವನ್ನು ಸಂಭ್ರಮಿಸಲು ಸಕಲ ತಯಾರಿ ಮಾಡಿಕೊಂಡಿದ್ದರು. ಆದರೆ, ಕ್ರಿಕೆಟ್‌ಪ್ರೇಮಿಗಳ ಕನಸು ಭಗ್ನವಾಗಿದೆ. ಟ್ರೋಫಿ ಗೆಲುವಿನ ಸಂಭ್ರಮವನ್ನು ಮುಂದಿನ ಟೂರ್ನಿಗೆ ಮುಂದೂಡಬೇಕಾಗಿದೆ. ತವರಿನಲ್ಲೇ ನಡೆದ ವಿಶ್ವಕಪ್‌ನಲ್ಲಿ ತಂಡದ ಸೋಲುಂಡಿದ್ದು ಕೋಟ್ಯಂತರ ಅಭಿಮಾನಿಗಳಿಗೆ ಬೇಸರ ತರಿಸಿದೆ.
ಇದನ್ನೂ ಓದಿ: ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಸೋಲು: ತೀವ್ರ ನಿರಾಸೆಯಿಂದ ಯುವಕ ಸಾವು!