ನವದೆಹಲಿ: 2022ರ ಭಾರತ ನ್ಯಾಯ ವರದಿ ಬಿಡುಗಡೆಯಾಗಿದ್ದು, ನ್ಯಾಯದಾನ ಮಾಡುವುದರಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲೇ ಅಗ್ರ ಸ್ಥಾನವನ್ನು ಗಳಿಸಿದೆ. ಹೌದು, ಮೊದಲ ನಾಲ್ಕು ಸ್ಥಾನಗಳಲ್ಲಿ ದಕ್ಷಿಣ ರಾಜ್ಯಗಳು ಇರುವುದು ವಿಶೇಷವಾಗಿದೆ. ಭಾರತ ನ್ಯಾಯ ವರದಿಯಲ್ಲಿ(ಐಜೆಆರ್) ಯಾವೆಲ್ಲಾ ವಿಷಯಗಳು ಇವೆ ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ..
ಏನಿದು ಭಾರತ ನ್ಯಾಯ ವರದಿ?: ಪೊಲೀಸ್ ಆಡಳಿತ, ನ್ಯಾಯಾಂಗ ವ್ಯವಸ್ಥೆ, ಕಾರಾಗೃಹಗಳ ಸ್ಥಿತಿಗತಿ ಹಾಗೂ ಕಕ್ಷಿದಾರರಿಗೆ ಕಾನೂನು ಸೌಲಭ್ಯಗಳ ಮಾನದಂಡಗಳನ್ನು ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. 2019ರ ವರ್ಷದಲ್ಲಿ ಪ್ರಾರಂಭವಾದ ಟಾಟಾ ಟ್ರಸ್ಟ್‌ಗಳ ಉಪಕ್ರಮವಾಗಿದೆ ಈ ಭಾರತ ನ್ಯಾಯ ವರದಿ. ಫೌಂಡೇಶನ್‌ನ ಪಾಲುದಾರರಲ್ಲಿ ಸೆಂಟರ್ ಫಾರ್ ಸೋಶಿಯಲ್ ಜಸ್ಟೀಸ್, ಕಾಮನ್ ಕಾಸ್, ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್, DAKSH, TISS-ಪ್ರಯಾಸ್, ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ಮತ್ತು ಹೌ ಇಂಡಿಯಾ ಲೈವ್ಸ್ ಹಾಗೂ ಐಜೆಆರ್ನೊಂದಿಗೆ ಅಂಕಿಅಂಶಗಳ ಪಾಲುದಾರಾಗಿದ್ದಾರೆ. ಬಜೆಟ್, ಮಾನವ ಸಂಪನ್ಮೂಲ, ಕೆಲಸದ ಹೊರೆ, ವೈವಿಧ್ಯತೆ, ಮೂಲಸೌಕರ್ಯ ಮತ್ತು ರಾಜ್ಯದ ಸ್ವಂತ ಘೋಷಿತ ಮಾನದಂಡಗಳು ಮತ್ತು ಮಾನದಂಡಗಳ ವಿರುದ್ಧದ ಪ್ರವೃತ್ತಿಗಳ ಬಗ್ಗೆ ವಿಶ್ಲೇಷಿಸಲಾಗಿದೆ.
ಕರ್ನಾಟಕಕ್ಕೆ ಅಗ್ರ ಸ್ಥಾನ: 2019ರಲ್ಲಿ ಕರ್ನಾಟಕ 6ನೇ ಕ್ರಮಾಂಕದಲ್ಲಿತ್ತು. 2020ರಲ್ಲಿ 14ನೇ ಸ್ಥಾನದಲ್ಲಿದ್ದ ಕರ್ನಾಟಕ ರಾಜ್ಯವು 13 ಸ್ಥಾನ ಮೇಲೇರಿತು. ವರದಿಯ ಪ್ರಕಾರ, ಕರ್ನಾಟಕ ರಾಜ್ಯವು ಹೈಕೋರ್ಟ್ ನ್ಯಾಯಾಧೀಶರ ಹುದ್ದೆಗಳನ್ನು ಶೇ.50ರಿಂದ 21 ಕ್ಕೆ ಇಳಿಸಿತು. ಆದರೆ, ಅಧೀನ ನ್ಯಾಯಾಲಯಗಳಲ್ಲಿ ಮಹಿಳಾ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸಿತು ಹಾಗೂ ತಲಾ ವೆಚ್ಚವನ್ನು ಸುಧಾರಣೆ ಮಾಡಿತ್ತು.
ಸಣ್ಣ ರಾಜ್ಯಗಳ ಪಟ್ಟಿಯಲ್ಲಿ ಸಿಕ್ಕೀಂ ರಾಜ್ಯ ಫಸ್ಟ್: 18 ದೊಡ್ಡ ಹಾಗೂ ಮಧ್ಯಮ ಗಾತ್ರದ ರಾಜ್ಯಗಳು ತಲಾ 1 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿವೆ. ಈ 18 ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವು ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ತಮಿಳುನಾಡು, ತೆಲಂಗಾಣ, ಗುಜರಾತ್ ಹಾಗೂ ಆಂಧ್ರಪ್ರದೇಶವು ನಂತರದ ಸ್ಥಾನಗಳನ್ನು ಪಡೆದಿವೆ. ಒಂದು ಕೋಟಿಗಿಂತ ಕಡಿಮೆ ಜನಸಂಖ್ಯೆ ಇರುವ ಏಳು ಸಣ್ಣ ರಾಜ್ಯಗಳ ಪಟ್ಟಿಯಲ್ಲಿ ಸಿಕ್ಕೀಂ ಪ್ರಥಮ ಸ್ಥಾನದಲ್ಲಿದ್ದು, ಅರುಣಾಚಲ ಪ್ರದೇಶ ಹಾಗೂ ತ್ರಿಪುರಾ ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.
ಎಸ್ಸಿ, ಎಸ್ಟಿ ಹಾಗೂ ಒಬಿಸಿ ಹುದ್ದೆಗಳ ಕೋಟಾ ಗುರಿಯನ್ನು ಕರ್ನಾಟಕ ರಾಜ್ಯ ತಲುಪಿದೆ. ಪೊಲೀಸ್ ಅಧಿಕಾರಿಗಳು ಮತ್ತು ಕಾನ್ಸ್ಟೇಬಲ್ಗಳ ನೇಮಕದಲ್ಲಿ ಕೋಟಾ ಮಾನದಂಡವನ್ನು ಪೂರ್ಣಗೊಳಿಸಲಾಗಿದೆ. ಇನ್ನು ನ್ಯಾಯಾಂಗದಲ್ಲಿ ಯಾವ ಮೂರು ಕೋಟಾಗಳನ್ನೂ ಪೂರ್ಣವಾಗಿ ಯಾವ ರಾಜ್ಯವೂ ಕೂಡಾ ಭರ್ತಿ ಮಾಡದೇ ಇರುವುದು ಬೆಳಕಿಗೆ ಬಂದಿದೆ.
ಹೈಕೋರ್ಟ್‌ಗಳಲ್ಲಿ ಶೇ.30ರಷ್ಟು ನ್ಯಾಯಾಧೀಶರ ಹುದ್ದೆ ಖಾಲಿ: ದೆಹಲಿ ಹಾಗೂ ಚಂಡೀಗಢ ಹೊರತುಪಡಿಸಿದರೆ, ಉಳಿದ ಯಾವುದೇ ರಾಜ್ಯ ಮತ್ತು ಕೇಂದ್ರಾಡಳಿತವು ತನ್ನ ಒಟ್ಟು ವಾರ್ಷಿಕ ವೆಚ್ಚದ ಶೇ.1ಕ್ಕಿಂತ ಹೆಚ್ಚು ದುಡ್ಡನ್ನು ನ್ಯಾಯಾಂಗ ವ್ಯವಸ್ಥೆಗೆ ಖರ್ಚು ಆಗಿಲ್ಲ. ಇನ್ನು ಹೈಕೋರ್ಟ್‌ಗಳಲ್ಲಿ ಶೇಕಡಾ 30ರಷ್ಟು ನ್ಯಾಯಾಧೀಶರ ಹುದ್ದೆಗಳು ಖಾಲಿ ಉಳಿದಿವೆ. 2022ರ ಡಿಸೆಂಬರ್ ಅವಧಿಯಲ್ಲಿ, ದೇಶವು ಪ್ರತಿ 10 ಲಕ್ಷ ಜನರಿಗೆ 19 ಜಡ್ಜ್ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಒಟ್ಟಾರೆ 4.8 ಕೋಟಿ ಕೇಸ್ಗಳು ಬಾಕಿ ಉಳಿದಿವೆ ಎಂದು ಭಾರತ ನ್ಯಾಯ ವರದಿ ಉಲ್ಲೇಖಿಸಿದೆ. ಒಂದು ದಶಕದ ಸಮಯದಲ್ಲಿ ಅಂದ್ರೆ, ಪ್ರತಿ 10 ಲಕ್ಷ ಜನರಿಗೆ 50 ಜಡ್ಜ್ಗಳು ಇರಬೇಕು ಎಂದು 1987ರಲ್ಲಿ ಕಾನೂನು ಆಯೋಗ ಸೂಚನೆ ನೀಡಿತ್ತು. ಪ್ರಸ್ತುತ ಕಾನೂನು ಆಯೋಗದ ಶಿಫಾರಸಿನ ಸಮೀಪವೂ ಕೂಡ ಹೋಗಲು ಆಗಿಲ್ಲ ಎನ್ನುವುದನ್ನು ವರದಿ ಹೇಳಿದೆ.
ಇದನ್ನೂ ಓದಿ: 1,600 ಕೋಟಿ ರೂ.ಗೆ ಏರ್ ಇಂಡಿಯಾ ಕಟ್ಟಡ ಖರೀದಿಸಲಿದೆ ಮಹಾರಾಷ್ಟ್ರ ಸರ್ಕಾರ