ನವದೆಹಲಿ : ಡೇಟಾ ಬ್ರೋಕರ್ ವಂಚನೆಗಳ ವಿಷಯದಲ್ಲಿ ಭಾರತವು ಎರಡನೇ ಅತಿ ಹೆಚ್ಚು ಬಾಧಿತ ದೇಶವಾಗಿದೆ ಮತ್ತು ಕಳೆದ 20 ವರ್ಷಗಳಲ್ಲಿ 10 ಡೇಟಾ ಉಲ್ಲಂಘನೆಗಳ ಮೂಲಕ ಭಾರತೀಯ ನಾಗರಿಕರ 1.8 ಕೋಟಿ (18.7 ಮಿಲಿಯನ್) ವೈಯಕ್ತಿಕ ದಾಖಲೆಗಳನ್ನು ಬಹಿರಂಗ ಮಾಡಲಾಗಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಡೇಟಾ ಬ್ರೋಕರ್ ಎನ್ನುವುದು ವಿವಿಧ ಮೂಲಗಳಿಂದ ಮಾಹಿತಿ ಒಟ್ಟುಗೂಡಿಸುವ ವ್ಯವಹಾರವಾಗಿದ್ದು, ಡೇಟಾವನ್ನು ಸುಧಾರಿಸಿ, ಸಂಸ್ಕರಿಸಿ ಅದನ್ನು ಬೇರೆ ವ್ಯವಹಾರ ಕಂಪನಿಗಳಿಗೆ ನೀಡುವ ವ್ಯಾಪಾರವಾಗಿದೆ.
ವಿಪಿಎನ್ ಸೇವಾ ಪೂರೈಕೆದಾರ ಸರ್ಫ್‌ಶಾರ್ಕ್‌ನ ಪ್ರಮುಖ ಡೇಟಾ ರಿಮೂವಲ್ ಸೇವೆಯಾದ ಇನ್‌ಕಾಗ್ನಿ ಪ್ರಕಾರ, ಡೇಟಾ ಬ್ರೋಕರ್ ಉಲ್ಲಂಘನೆಗಳಿಂದ ಅತಿ ಹೆಚ್ಚು ಪ್ರಭಾವಿತವಾಗಿರುವ ಅಗ್ರ ಐದು ದೇಶಗಳಲ್ಲಿ ಭಾರತವೂ ಸೇರಿದೆ. ಈ ವಿಷಯದಲ್ಲಿ ಅಮೆರಿಕ ಮುಂಚೂಣಿಯಲ್ಲಿದ್ದು, ಅಲ್ಲಿ ಅವರ ನಾಗರಿಕರ ಬೃಹತ್ 207.6 ಮಿಲಿಯನ್ ವೈಯಕ್ತಿಕ ದಾಖಲೆಗಳನ್ನು ಬಹಿರಂಗ ಮಾಡಲಾಗಿದೆ. ಯುಕೆ, ಬ್ರೆಜಿಲ್ ಮತ್ತು ಕೆನಡಾ ಇತರ ಹೆಚ್ಚು ಬಾಧಿತ ದೇಶಗಳಾಗಿವೆ.
ಡೇಟಾ ಗೌಪ್ಯತೆ ಕಾಪಾಡಿಕೊಳ್ಳುವುದು ತೀರಾ ಅಸಾಧ್ಯವಾಗುತ್ತಿದೆ. ಇಷ್ಟಾದರೂ ಅನೇಕ ಜನರಿಗೆ ಡೇಟಾ ಬ್ರೋಕರ್‌ಗಳು ಕಾರ್ಯನಿರ್ವಹಿಸುವ ಗುಪ್ತ ಮಾರುಕಟ್ಟೆಯ ಬಗ್ಗೆ ಇನ್ನೂ ಏನೂ ಗೊತ್ತಿಲ್ಲ. ಸಂಶೋಧನೆಗಳ ಪ್ರಕಾರ ಡೇಟಾ ಬ್ರೋಕರ್‌ಗಳು ಸಹ ಯಾವುದೇ ಇತರ ಕಂಪನಿಯಂತೆ ಡೇಟಾ ಕಳವು ಎದುರಿಸಬಹುದು. ಆದಾಗ್ಯೂ, ಅಂತಹ ಕಂಪನಿಗಳು ಬೃಹತ್ ಪ್ರಮಾಣದ ಸೂಕ್ಷ್ಮ ಡೇಟಾದೊಂದಿಗೆ ವ್ಯವಹರಿಸುತ್ತಿವೆ ಎಂದು ಇಂಕಾಗ್ನಿ ಮುಖ್ಯಸ್ಥ ಡೇರಿಯಸ್ ಬೆಲೆಜೆವಾಸ್ ಹೇಳಿದರು.
ಇಂಕಾಗ್ನಿ ಸಂಶೋಧಕರು 506 ನೋಂದಾಯಿತ, ಯುಎಸ್ ಆಧಾರಿತ ಡೇಟಾ ಬ್ರೋಕರ್‌ಗಳನ್ನು ವಿಶ್ಲೇಷಿಸಿದ್ದಾರೆ ಮತ್ತು ಕಳೆದ 20 ವರ್ಷಗಳಲ್ಲಿ ಈ ಕಂಪನಿಗಳಲ್ಲಿ 23 (4.5%) ಡೇಟಾ ಸೋರಿಕೆಯ ಘಟನೆಗಳು ನಡೆದಿವೆ ಮತ್ತು ಇಲ್ಲಿಯವರೆಗೆ ಕನಿಷ್ಠ 10 ಡೇಟಾ ಬ್ರೋಕರ್ ಉಲ್ಲಂಘನೆಗಳು ಕನಿಷ್ಠ 1 ಮಿಲಿಯನ್ ಬಳಕೆದಾರರ ಮಾಹಿತಿ ಸೋರಿಕೆಗೆ ಕಾರಣವಾಗಿವೆ. ಈ ಮೂಲಕ ಒಟ್ಟು 444.5 ಮಿಲಿಯನ್ ದಾಖಲೆಗಳನ್ನು ಬಹಿರಂಗಪಡಿಸಲಾಗಿದೆ. ಈ ಐದು ದೇಶಗಳ ಪೈಕಿ ಪೀಪಲ್ ಡೇಟಾ ಲ್ಯಾಬ್ಸ್ ಕಂಪನಿಯ ಮಾಹಿತಿ ಸೋರಿಕೆಯು ಅತ್ಯಂತ ಮಹತ್ವದ ಪ್ರಕರಣವಾಗಿದೆ.
ಅಮೆರಿಕದ ದಾಖಲೆಗಳ ಪೈಕಿ ಮೂರನೇ ಒಂದು ಭಾಗದಷ್ಟು (35.2 ಪ್ರತಿಶತ), ಬ್ರೆಜಿಲಿಯನ್ ದಾಖಲೆಗಳ ಸುಮಾರು ಐದನೇ ಎರಡರಷ್ಟು (ಶೇ. 42.1), ಕೆನಡಾದ ಅರ್ಧಕ್ಕಿಂತ ಹೆಚ್ಚು (ಶೇ 54.3), ಇಂಗ್ಲೆಂಡ್ ಅರ್ಧಕ್ಕಿಂತ ಹೆಚ್ಚು (56.7 ಶೇಕಡಾ) ದಾಖಲೆಗಳು ಮತ್ತು ಭಾರತೀಯ ದಾಖಲೆಗಳ ಮೂರನೇ ಎರಡರಷ್ಟು (68.5 ಶೇಕಡಾ) ಮಾಹಿತಿಯನ್ನು ಪೀಪಲ್ ಡೇಟಾ ಲ್ಯಾಬ್ಸ್ ಕಂಪನಿಯು ಸೋರಿಕೆ ಮಾಡಿದೆ.
ಕೋವಿಡ್ ಸಾಂಕ್ರಾಮಿಕ ರೋಗ ಹರಡುವಿಕೆಯೊಂದಿಗೆ 2020ನೇ ವರ್ಷ ಈ ವಿಷಯದಲ್ಲಿ ಸವಾಲಿನ ವರ್ಷವಾಗಿತ್ತು. ಆ ವರ್ಷದಲ್ಲಿ ಸೈಬರ್ ಅಪರಾಧದಲ್ಲಿ ಗಮನಾರ್ಹ ಏರಿಕೆಯಾಗಿತ್ತು. ಆಗ ಸೈಬರ್ ಕ್ರೈಮ್ ಸಂತ್ರಸ್ತರ ಸಂಖ್ಯೆ ಶೇಕಡಾ 69 ರಷ್ಟು ಹೆಚ್ಚಾಗಿದ್ದು ಗಮನಾರ್ಹ. ಪರಿಣಾಮವಾಗಿ, ಈ ಸಮಯದಲ್ಲಿ ಒಟ್ಟು ಒಂಬತ್ತು ಡೇಟಾ ಸೋರಿಕೆಗಳು ಸಂಭವಿಸಿವೆ ಎಂದು ವರದಿ ತೋರಿಸಿದೆ.
ಇದನ್ನೂ ಓದಿ : 5ಜಿ: ಜಾಗತಿಕ ಮೊಬೈಲ್ ಡೇಟಾ ಸ್ಪೀಡ್ ಚಾರ್ಟ್ನಲ್ಲಿ ಭಾರತ 10 ಸ್ಥಾನ ಏರಿಕೆ