ನವದೆಹಲಿ : ಒಂದು ಕಡೆ ರಷ್ಯಾದಿಂದ ದಾಖಲೆ ಪ್ರಮಾಣದಲ್ಲಿ ಕಚ್ಚಾ ಇಂಧನ ತೈಲ ಖರೀದಿ ಮಾಡುತ್ತಿರುವ ಭಾರತ, ಇನ್ನೊಂದೆಡೆ ಯುರೋಪಿಗೆ ಅತಿ ಹೆಚ್ಚು ಸಂಸ್ಕರಿತ ಇಂಧನ ತೈಲ ಪೂರೈಕೆದಾರನಾಗಿ ಹೊರಹೊಮ್ಮಿದೆ. ಕೆಪ್ಲರ್ ಅನಲಿಟಿಕ್ಸ್ ಡೇಟಾ ಈ ಮಾಹಿತಿ ನೀಡಿದೆ. ಯುರೋಪ್ ರಾಷ್ಟ್ರಗಳು ರಷ್ಯಾದಿಂದ ತರಿಸಿಕೊಳ್ಳುತ್ತಿದ್ದ ಕಚ್ಚಾ ತೈಲದ ಮೇಲೆ ನಿರ್ಬಂಧ ಹೇರಿದ ನಂತರ ಈಗ ಅವು ಭಾರತದ ಮೇಲೆ ಹೆಚ್ಚು ಅವಲಂಬಿತವಾಗುತ್ತಿವೆ. ಯುರೋಪಿಯನ್ ಒಕ್ಕೂಟ ಭಾರತದಿಂದ ತರಿಸಿಕೊಳ್ಳುತ್ತಿರುವ ಸಂಸ್ಕರಿತ ಇಂಧನ ತೈಲದ ಪ್ರಮಾಣ ದಿನವೊಂದಕ್ಕೆ 3,60,000 ಬ್ಯಾರೆಲ್ ದಾಟಿದೆ. ಇದು ಸೌದಿ ಅರೇಬಿಯಾ ಪೂರೈಸುವ ತೈಲಕ್ಕಿಂತ ತುಸು ಹೆಚ್ಚಾಗಿದೆ ಎಂದು ಕೆಪ್ಲರ್ ತಿಳಿಸಿದೆ.
ಭಾರತದಿಂದ ತೈಲ ಆಮದು ಮಾಡಿಕೊಳ್ಳುವುದು ಯುರೋಪಿಯನ್ ಒಕ್ಕೂಟಕ್ಕೆ ಒಂದು ರೀತಿಯಲ್ಲಿ ಎರಡು ಅಲಗಿನ ಖಡ್ಗದಂತಾಗಿದೆ. ಈ ಮುಂಚೆ ಯುರೋಪಿಗೆ ಬೇಕಾಗುತ್ತಿದ್ದ ಡೀಸೆಲ್ನ ಅತಿಹೆಚ್ಚು ಪ್ರಮಾಣವನ್ನು ರಷ್ಯಾ ನೀಡುತ್ತಿತ್ತು. ಈಗ ನಿರ್ಬಂಧದ ಕಾರಣದಿಂದ ಅದು ನಿಂತು ಹೋಗಿದೆ. ಆದರೆ ಈಗ ಪರ್ಯಾಯ ಪೂರೈಕೆ ಮಾರ್ಗಗಳನ್ನು ಹುಡುಕುತ್ತಿರುವ ಯುರೋಪಿಯನ್ ಒಕ್ಕೂಟ ಪರೋಕ್ಷವಾಗಿ ರಷ್ಯಾ ತೈಲಕ್ಕೆ ಬೇಡಿಕೆ ಹೆಚ್ಚಾಗುವಂತೆ ಮಾಡಿದೆ. ಇದರ ಜೊತೆಗೆ ಕಡಿಮೆ ದರದ ರಷ್ಯಾ ತೈಲ ಪೂರೈಕೆ ನಿಂತು ಹೋಗಿರುವುದರಿಂದ ಯುರೋಪಿನ ಸ್ಥಳೀಯ ರಿಫೈನರಿ ಕಂಪನಿಗಳು ತೀವ್ರ ಪೈಪೋಟಿ ಎದುರಿಸುವಂತಾಗಿದೆ.
ಕೆಪ್ಲರ್ ಡೇಟಾ ಪ್ರಕಾರ, ಭಾರತಕ್ಕೆ ರಷ್ಯಾದ ಕಚ್ಚಾ ತೈಲ ಪೂರೈಕೆಯು ಏಪ್ರಿಲ್‌ನಲ್ಲಿ ದಿನಕ್ಕೆ 2 ಮಿಲಿಯನ್ ಬ್ಯಾರೆಲ್‌ಗಳನ್ನು ಮೀರುವ ನಿರೀಕ್ಷೆಯಿದೆ, ಇದು ರಾಷ್ಟ್ರದ ಒಟ್ಟಾರೆ ತೈಲ ಆಮದಿನ ಶೇಕಡಾ 44 ರಷ್ಟು ಆಗುತ್ತದೆ. ಉಕ್ರೇನ್ ಯುದ್ಧದ ನಡುವೆ ರಿಯಾಯಿತಿ ದರದಲ್ಲಿ ತೈಲವನ್ನು ನೀಡಲು ಪ್ರಾರಂಭಿಸಿದ ನಂತರ 2022-23 (FY23) ರಲ್ಲಿ ರಷ್ಯಾ ಮೊದಲ ಬಾರಿಗೆ ಭಾರತಕ್ಕೆ ಪ್ರಮುಖ ತೈಲ ಪೂರೈಕೆದಾರನಾಗಿ ಹೊರಹೊಮ್ಮಿತು. ರಷ್ಯಾದಿಂದ ತೈಲ ಖರೀದಿಸುವುದರ ವಿರುದ್ಧ ಪಾಶ್ಚಿಮಾತ್ಯ ರಾಷ್ಟ್ರಗಳು ಧ್ವನಿ ಎತ್ತಿದರೂ ಭಾರತ ಅದಕ್ಕೆ ಒಂದಿಷ್ಟೂ ತಲೆಕೆಡಿಸಿಕೊಂಡಿಲ್ಲ. ಭಾರತವು ಈ ವಿಚಾರದಲ್ಲಿ ದೃಢವಾದ ನಿಲುವನ್ನು ತೆಗೆದುಕೊಂಡಿದೆ ಮತ್ತು ಇಂಧನ ಭದ್ರತೆಯನ್ನು ಸಾಧಿಸಲು ಎಲ್ಲ ಆಯ್ಕೆಗಳನ್ನು ಮುಕ್ತವಾಗಿಟ್ಟಿದೆ ಎಂದು ಹೇಳಿದೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಫೆಬ್ರವರಿಯಲ್ಲಿ ಪ್ರತಿ ಬ್ಯಾರೆಲ್‌ಗೆ USD 60 ರ ಪಾಶ್ಚಿಮಾತ್ಯ ಬೆಲೆ ಮಿತಿಯ ಹೊರತಾಗಿಯೂ ರಷ್ಯಾವು ಫೆಬ್ರವರಿಯಲ್ಲಿ ಭಾರತಕ್ಕೆ ಅತ್ಯಧಿಕ ಕಚ್ಚಾ ತೈಲವನ್ನು ರಫ್ತು ಮಾಡಿದ ದೇಶವಾಗಿದೆ. ಫೆಬ್ರವರಿಯಲ್ಲಿ ರಷ್ಯಾದಿಂದ 3.35 ಶತಕೋಟಿ ಡಾಲರ್ ಮೌಲ್ಯದ ಕಚ್ಚಾ ತೈಲ ಆಮದು ಮಾಡಿಕೊಳ್ಳಲಾಗಿದೆ. ಇದೇ ಅವಧಿಯಲ್ಲಿ ಸೌದಿ ಅರೇಬಿಯಾದಿಂದ 2.30 ಶತಕೋಟಿ ಡಾಲರ್ ಮತ್ತು ಇರಾಕ್ 2.03 ಶತಕೋಟಿ ಡಾಲರ್ ಮೊತ್ತದ ತೈಲ ತರಿಸಿಕೊಳ್ಳಲಾಗಿದೆ. ರಷ್ಯಾದ ಇಂಧನ ಆದಾಯಗಳನ್ನು ನಿಯಂತ್ರಿಸುವ ಸಲುವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ಇಂಧನ ದರದ ಮೇಲೆ ಮಿತಿಯನ್ನು ಹೇರಿವೆ.
ಇದನ್ನೂ ಓದಿ : 3500 ಲೋನ್ ಆ್ಯಪ್ ಪ್ಲೇ ಸ್ಟೋರ್ನಿಂದ ಹೊರಕ್ಕೆ: ವಂಚಕ ಆ್ಯಪ್ಗಳ ವಿರುದ್ಧ ಗೂಗಲ್ ಕ್ರಮ