ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 21,880 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 4,38,47,065ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಸದ್ಯ ದೇಶದಲ್ಲಿ 1,49,482 ಸಕ್ರಿಯ ಪ್ರಕರಣಗಳಿವೆ. ನಿನ್ನೆ(ಗುರುವಾರ) 60 ಮಂದಿ ಸೋಂಕಿಗೆ ಬಲಿಯಾಗಿದ್ದು, ಮೃತರ ಸಂಖ್ಯೆ 5,25,930ಕ್ಕೆ ಏರಿದೆ. ರಾಷ್ಟ್ರೀಯ ಕೋವಿಡ್ ಚೇತರಿಕೆ ದರ ಶೇ.98.46 ರಷ್ಟಿದೆ. 21,219 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ 43,171,653 ಮಂದಿ ಚೇತರಿಸಿಕೊಂಡಂತಾಗಿದೆ. ರಾಷ್ಟ್ರವ್ಯಾಪಿ ಕೋವಿಡ್-19 ವ್ಯಾಕ್ಸಿನೇಷನ್ ಅಭಿಯಾನದಡಿ ಈವರೆಗೆ 201.30 ಕೋಟಿ ಲಸಿಕೆ ನೀಡಲಾಗಿದೆ.
ಜು.21 ರಂದು, ಕೇಂದ್ರ ಸರ್ಕಾರ ಕೋವಿಡ್ ಪ್ರಕರಣ ಉಲ್ಬಣಗೊಂಡಿರುವ 9 ರಾಜ್ಯಗಳಿಗೆ ಪ್ರತಿದಿನ ತೀವ್ರತರವಾದ ಉಸಿರಾಟದ ಕಾಯಿಲೆ (SARI) ಮತ್ತು ಇನ್ಫ್ಲುಯೆನ್ಸ ರೀತಿಯ ಅನಾರೋಗ್ಯದ (ILI) ಜಿಲ್ಲಾವಾರು ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ವರದಿ ಮಾಡಲು ನಿರ್ದೇಶಿಸಿದೆ. ಒಂಬತ್ತು ರಾಜ್ಯಗಳೆಂದರೆ,
- ಕೇರಳ
- ಪಶ್ಚಿಮ ಬಂಗಾಳ
- ತಮಿಳುನಾಡು
- ಮಹಾರಾಷ್ಟ್ರ
- ಅಸ್ಸಾಂ
- ಆಂಧ್ರಪ್ರದೇಶ
- ಹಿಮಾಚಲ ಪ್ರದೇಶ
- ಮಿಜೋರಾಂ
- ಅರುಣಾಚಲ ಪ್ರದೇಶ
ಇದನ್ನೂ ಓದಿ: ಅಮೆರಿಕಾದಲ್ಲಿ ಶೇ. 70ರಷ್ಟು ಮಂದಿಗೆ ಕೋವಿಡ್: ಅಧ್ಯಕ್ಷ ಜೋ ಬೈಡನ್ಗೂ ತಗುಲಿದ ಸೋಂಕು
ಅಮೆರಿಕಾದಲ್ಲಿಯೇ ಅತಿ ಹೆಚ್ಚು ಪ್ರಕರಣ, ಸಾವು: ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಅಂಕಿಅಂಶಗಳ ಪ್ರಕಾರ ಅಮೆರಿಕಾದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 90 ಮಿಲಿಯನ್ ಮೀರಿದೆ. 9,00,66,295 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು 10, 25,796 ಮಂದಿ ಸಾವಿಗೀಡಾಗಿದ್ದಾರೆ. ವಿಶ್ವದ ಅತಿ ಹೆಚ್ಚು ಪ್ರಕರಣಗಳು ಮತ್ತು ಸಾವುಗಳೊಂದಿಗೆ ಅಮೆರಿಕಾ ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾದ ರಾಷ್ಟ್ರವಾಗಿ ಉಳಿದಿದೆ. ಡಿಸೆಂಬರ್ 13, 2021ರಂದು 50 ಮಿಲಿಯನ್ ತಲುಪಿತು. ಜನವರಿ 9, 2022 ರಂದು 60 ಮಿಲಿಯನ್ ದಾಟಿದೆ. ಬಳಿಕ ಮಾರ್ಚ್ 29 ರಂದು 80 ಮಿಲಿಯನ್ ಗಡಿ ದಾಟಿತ್ತು.