ನವದೆಹಲಿ: ದೇಶದ ವಿವಿಧೆಡೆ ಇರುವ ಬಿಬಿಸಿ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಯುತ್ತಿದೆ. ಆದಾಯ ತೆರಿಗೆ ಇಲಾಖೆ ತಂಡಗಳು ದೆಹಲಿ ಮತ್ತು ಮುಂಬೈನಲ್ಲಿರುವ ಕಚೇರಿಗಳಲ್ಲಿ ಸಮೀಕ್ಷೆ ನಡೆಸುತ್ತಿವೆ. ತೆರಿಗೆ ವಂಚನೆ ತನಿಖೆಯ ಭಾಗವಾಗಿ ಆದಾಯ ತೆರಿಗೆ ಇಲಾಖೆಯು ಮಂಗಳವಾರ ಬಿಬಿಸಿಯ ದೆಹಲಿ ಮತ್ತು ಮುಂಬೈ ಕಚೇರಿಗಳಲ್ಲಿ ಸಮೀಕ್ಷೆ ನಡೆಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2002 ರಲ್ಲಿ ನಡೆದ ಗುಜರಾತ್ ಗಲಭೆಗಳ ಕುರಿತಾಗಿ ಎರಡು ಕಂತುಗಳಲ್ಲಿ ಸಾಕ್ಷ್ಯಚಿತ್ರವೊಂದನ್ನು ಬಿಬಿಸಿ ಪ್ರಸಾರ ಮಾಡಿತ್ತು. ಇದಾಗಿ ಎರಡು ವಾರಗಳ ನಂತರ ಭಾರತದಲ್ಲಿರುವ ಅದರ ಕಚೇರಿಗಳ ಮೇಲೆ ದಾಳಿ ನಡೆದಿದೆ. ಆದಾಯ ತೆರಿಗೆ ಇಲಾಖೆಯು ಕಂಪನಿಯ ವ್ಯವಹಾರ ಕಾರ್ಯಾಚರಣೆಗಳು ಮತ್ತು ಅದರ ಭಾರತೀಯ ಘಟಕಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದೆ ಎಂದು ಆದಾಯ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ತೆರಿಗೆ ಸಮೀಕ್ಷೆಯ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆಯು ಕಂಪನಿಯ ವ್ಯವಹಾರ ನಡೆಯುವ ಆವರಣವನ್ನು ಮಾತ್ರ ಪರಿಶೀಲಿಸುತ್ತದೆ. ಅದರ ಪ್ರವರ್ತಕರು ಅಥವಾ ನಿರ್ದೇಶಕರ ನಿವಾಸಗಳು ಮತ್ತು ಇತರ ಸ್ಥಳಗಳ ಮೇಲೆ ದಾಳಿ ಮಾಡುವುದಿಲ್ಲ.
ಐಟಿ ದಾಳಿ ಬಗ್ಗೆ ಕಾಂಗ್ರೆಸ್ ಟೀಕೆ.. ಟ್ವೀಟ್: ಬಿಬಿಸಿ ಕಚೇರಿಗಳಲ್ಲಿ ಆದಾಯ ತೆರಿಗೆ ಸಮೀಕ್ಷೆ ನಡೆಸುತ್ತಿರುವ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ. ಆದಾಯ ತೆರಿಗೆ ಸಮೀಕ್ಷೆಯನ್ನು ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಕಾಂಗ್ರೆಸ್ ತಳಕು ಹಾಕಲು ಪ್ರಯತ್ನಿಸಿದೆ. ಮೊದಲು ಬಿಬಿಸಿ ಸಾಕ್ಷ್ಯಚಿತ್ರ ಬಂದಿತು, ಅದನ್ನು ನಿಷೇಧಿಸಲಾಯಿತು. ಇದೀಗ ಬಿಬಿಸಿ ಮೇಲೆ ಐಟಿ ದಾಳಿ ನಡೆದಿದೆ. ಇದು ಅಘೋಷಿತ ತುರ್ತು ಪರಿಸ್ಥಿತಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಮತ್ತೊಂದೆಡೆ ಮಹುವಾ ಮೊಯಿತ್ರಾ ಕೂಡ ಟ್ವೀಟ್ ಮಾಡಿದ್ದಾರೆ. ಬಿಬಿಸಿಯ ದೆಹಲಿ ಕಚೇರಿಯಲ್ಲಿ ಆದಾಯ ತೆರಿಗೆ ದಾಳಿಯ ಸುದ್ದಿ ಬಂದಿದೆ. ತುಂಬಾ ಚೆನ್ನಾಗಿದೆ. ಇದು ಅನಿರೀಕ್ಷಿತ ಎಂದು ಟ್ವೀಟ್ನಲ್ಲಿ ಬರೆದಿದ್ದಾರೆ.
ಬಿಬಿಸಿ ಸಾಕ್ಷ್ಯಚಿತ್ರ ನಿಷೇಧಿಸಿದ್ದ ಕೇಂದ್ರ ಸರ್ಕಾರ: ಬಿಬಿಸಿಯು ಇತ್ತೀಚೆಗೆ 2002 ರ ಗುಜರಾತ್ ಗಲಭೆಗಳನ್ನು ಆಧರಿಸಿದ ಸಾಕ್ಷ್ಯಚಿತ್ರ ಪ್ರಸಾರ ಮಾಡಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಕೇಂದ್ರೀಕರಿಸಿ ಇದನ್ನು ತಯಾರಿಸಲಾಗಿದೆ. ಈ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿವಾದಗಳು ಎದ್ದಿವೆ. ಈ ಸಾಕ್ಷ್ಯಚಿತ್ರವನ್ನು ಸಾಮಾಜಿಕ ತಾಣದಲ್ಲಿ ನಿಷೇಧಿಸಲಾಗಿದೆ ಹಾಗೂ ಇದು ಬೆಳಕಿಗೆ ಬಂದ ಕೂಡಲೇ ಇದು ಅಪಪ್ರಚಾರ ಎಂದು ಹೇಳಿ ಸರ್ಕಾರ ಅದರ ಪ್ರದರ್ಶನವನ್ನು ನಿಷೇಧಿಸಿತು.
ಸುಪ್ರೀಂಕೋರ್ಟ್ನಿಂದ ಅರ್ಜಿ ವಜಾ: ಆದರೆ, ದೇಶದ ಹಲವು ವಿಶ್ವವಿದ್ಯಾಲಯಗಳಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಗದ್ದಲ ಎದ್ದಿತ್ತು. ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳೂ ಸಲ್ಲಿಕೆಯಾಗಿದ್ದು, ಬಿಬಿಸಿ ಸಾಕ್ಷ್ಯಚಿತ್ರವನ್ನು ನಿಷೇಧಿಸುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಪಕ್ಷಗಳು ಬಿಬಿಸಿ ಸಾಕ್ಷ್ಯಚಿತ್ರದೊಂದಿಗೆ ಆದಾಯ ತೆರಿಗೆ ದಾಳಿಯನ್ನು ಜೋಡಿಸುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ.
ಇಲ್ಲಿ ನಾವು ಅದಾನಿ ಹಿಂಡೆನ್‌ಬರ್ಗ್ ವಿವಾದದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗಾಗಿ ಆಗ್ರಹಿಸುತ್ತಿದ್ದೇವೆ ಮತ್ತು ಅಲ್ಲಿ ಸರ್ಕಾರವು ಬಿಬಿಸಿಗೆ ಕಿರುಕುಳ ನೀಡುತ್ತಿದೆ. ವಿನಾಶ ಕಾಲೇ ವಿಪರೀತ್ ಬುದ್ಧಿ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಬಿಬಿಸಿ ನಿಷೇಧ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್