ತಿರುಮಲ(ಆಂಧ್ರಪ್ರದೇಶ): ಪ್ರಪಂಚದ ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿರುವ ತಿರುಮಲ ವೆಂಕಟೇಶ್ವರ ದೇವಸ್ಥಾನ ಹೊಸದೊಂದು ದಾಖಲೆ ನಿರ್ಮಾಣ ಮಾಡಿದೆ. ದೇವಾಲಯದ ಹುಂಡಿಯಲ್ಲಿ ಕಳೆದ ಸೋಮವಾರ ಒಂದೇ ದಿನ ದಾಖಲೆಯ 6.18 ಕೋಟಿ ರೂಪಾಯಿ ಸಂಗ್ರಹವಾಗಿದೆ.
ಕೋವಿಡ್ ನಿರ್ಬಂಧ ಸಡಿಲಿಕೆ ನಂತರ ಒಂದೇ ದಿನ ಸಂಗ್ರಹವಾಗಿರುವ ಅತಿ ಹೆಚ್ಚು ಮೊತ್ತ ಇದಾಗಿದೆ ಎಂದು ಟಿಡಿಡಿ ಹೇಳಿಕೊಂಡಿದೆ. ಕೊರೊನಾ ಮಹಾಮಾರಿಗೋಸ್ಕರ ವಿಧಿಸಲಾಗಿದ್ದ ನಿರ್ಬಂಧ ಸಡಲಿಕೆ ಮಾಡಿದ ಬಳಿಕ, ದೇವಸ್ಥಾನದಲ್ಲಿ ಎಲ್ಲ ರೀತಿಯ ಸೇವೆ ಮತ್ತು ದರ್ಶನ ಆರಂಭಗೊಂಡಿವೆ. ಹೀಗಾಗಿ, ಕಳೆದ ಸೋಮವಾರ ಅತ್ಯಧಿಕ ದೇಣಿಗೆ ಹರಿದು ಬಂದಿದೆ ಎಂದು ಟಿಡಿಡಿ ಹಣಕಾಸು ಸಲಹೆಗಾರ ಬಾಲಾಜಿ ತಿಳಿಸಿದ್ದಾರೆ.
ಈ ಹಿಂದೆ 2018ರಲ್ಲಿ ಟಿಟಿಡಿ ಹುಂಡಿಯಲ್ಲಿ ಒಂದೇ ದಿನ ದಾಖಲೆಯ 6.45 ಕೋಟಿ ರೂಪಾಯಿ ಸಂಗ್ರಹವಾಗಿತ್ತು, ಇದಾದ ಬಳಿಕ ಇದೀಗ ಮತ್ತೊಮ್ಮೆ ಒಂದೇ ದಿನ 6 ಕೋಟಿ ಗಡಿ ದಾಟಿದೆ. ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡಲು ಶುರು ಮಾಡಿದ್ದಾರೆ.