ಸೂರತ್ (ಗುಜರಾತ್): ಕುದುರೆ, ಅಲಂಕಾರಿ ವಾಹನಗಳಲ್ಲಿ ಬಹುತೇಕ ಮದುವೆ ಮೆರವಣಿಗೆಗಳು ನಡೆಯುವುದು ಸಾಮಾನ್ಯ. ಆದ್ರೆ ಇಲ್ಲೊಂದು ಮದುವೆ ಮೆರವಣಿಗೆಯು ಎತ್ತಿನ ಬಂಡಿಯಲ್ಲಿ ನಡೆದಿರುವುದು ವಿಶೇಷ. ನೂರು ಕೋಟಿ ರೂ.ಗೂ ಹೆಚ್ಚು ಬೆಲೆ ಬಾಳುವ ಐಷಾರಾಮಿ ಕಾರ್ಗಳನ್ನು ಬಿಟ್ಟು ಎತ್ತಿನ ಬಂಡಿಯಲ್ಲೇ ವರನ ಮೆರವಣಿಗೆ ನಡೆದಿರುವುದು ವಿನೂತನವೇ ಸರಿ. ಹೌದು, ಇವೆಲ್ಲ ಅಪರೂಪದ ದೃಶ್ಯಗಳು ಕಂಡುಬಂದಿದ್ದು ಸೂರತ್ ನಗರದಲ್ಲಿ.
ಬಿಜೆಪಿ ಮುಖಂಡರೊಬ್ಬರ ಪುತ್ರನ ಮದುವೆ ಮೆರವಣಿಗೆಯು ಅದ್ಧೂರಿಯಾಗಿ ಮತ್ತು ವಿನೂತನವಾಗಿ ನಡೆದಿದೆ. ಈ ಮೆರವಣಿಗೆಯಲ್ಲಿ ಜನರು ವರನನ್ನು ಅಚ್ಚರಿಯಿಂದ ವೀಕ್ಷಿಸಿದರು. ಮದುಮಗನು ಎತ್ತಿನ ಗಾಡಿಯಲ್ಲಿ ವಿವಾಹದ ಸ್ಥಳಕ್ಕೆ ಹೊರಟಿದ್ದ ದೃಶ್ಯವಂತೂ ಎಲ್ಲರನ್ನು ನಿಬ್ಬೆರಗಾಗಿಸಿತು.
ಎತ್ತಿನ ಬಂಡಿಗೆ ಐಷಾರಾಮಿ ಕಾರ್ಗಳ ಬೆಂಗಾವಲು: ವರನಿರುವ ಎತ್ತಿನ ಬಂಡಿಗೆ ಐಷಾರಾಮಿ ಮತ್ತು ಸ್ಪೋರ್ಟ್ಸ್ ಕಾರ್ಗಳು ಬೆಂಗಾವಲಾಗಿ ಹೊರಟಂತೆ ಕಾಣಿಸಿದವು. ಈ ಐಷಾರಾಮಿ ಕಾರ್ ಲೈನ್ ಸುಮಾರು 2 ಕಿ.ಮೀ. ಉದ್ದವಿತ್ತು. ಬಹುಶಃ ಮೊಟ್ಟಮೊದಲ ಬಾರಿಗೆ ಗುಜರಾತಿನಲ್ಲಿ ಇಂತಹ ಮೆರವಣಿಗೆ ಕಂಡುಬಂದಿದೆ. ಅದರಲ್ಲೂ ಮದುಮಗನು ಎತ್ತಿನ ಗಾಡಿಯಲ್ಲಿ ಕುಳಿತು ಕೋಟ್ಯಂತರ ರೂಪಾಯಿ ಮೌಲ್ಯದ ಕಾರ್ಗಳೊಂದಿಗೆ ಮೆರವಣಿಗೆ ನಡೆಸಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಈ ರೀತಿ ಬಹುಶಃ ಚಲನಚಿತ್ರಗಳಲ್ಲಿ ಮಾತ್ರ ಕಾಣಲು ಸಿಗುತ್ತದೆ. ಆದರೆ, ಸೂರತ್‌ನ ವರಾಚಾ ಪ್ರದೇಶದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ 100ಕ್ಕೂ ಹೆಚ್ಚು ವಾಹನಗಳನ್ನು ನೋಡಿ ಜನರು ಆಶ್ಚರ್ಯಚಕಿತರಾದರು. ಕೋಟ್ಯಂತರ ರೂಪಾಯಿ ಮೌಲ್ಯದ ಕಾರ್ಗಳು ಒಂದರ ಹಿಂದೊಂದರಂತೆ ಸಾಗುತ್ತಿದ್ದವು. ಮದುಮಗ ಐಷಾರಾಮಿ ಕಾರ್ಗಳಲ್ಲಿ ಕುಳಿತುಕೊಳ್ಳದೇ, ಎತ್ತಿನ ಗಾಡಿಯಲ್ಲಿ ವಿರಾಜಮಾನವಾಗಿ ಕುಳಿತಿರುವುದು ಕಂಡುಬಂದಿದೆ.
ನಗರದ ಮೋಟ ವರಚ ಪ್ರದೇಶದಲ್ಲಿ 2 ಕಿ.ಮೀ. ಉದ್ದದ ಕಾರ್ಗಳ ಸಾಲು ನೋಡಲು ಜನಸಾಗರವೇ ನೆರೆದಿತ್ತು. ನಗರದ ಬಿಜೆಪಿ ಮುಖಂಡ ಭರತ್ ವಘಾಸಿಯಾ ಇಬ್ಬರು ಪುತ್ರರನ್ನು ವಿಶಿಷ್ಟ ರೀತಿಯಲ್ಲಿ ವಿವಾಹವಾಗಿದ್ದಾರೆ ಎಂದು ತಿಳಿದು ಬಂದಿದೆ. ವರಚಾ ಪ್ರದೇಶದ ರಿವರ್ ಪ್ಯಾಲೇಸ್‌ನಿಂದ ಆರಂಭವಾದ ಮೆರವಣಿಗೆಯು ನಗರದ ಉತ್ತರಾಯಣ ಪಕ್ಷದ ಪ್ಲಾಟ್‌ಗೆ ತಲುಪಿತು.
ಸೌರಾಷ್ಟ್ರದ ಸಂಪ್ರದಾಯ: ಬಿಜೆಪಿ ನಾಯಕ ತಮ್ಮ ಪುತ್ರರ ಮದುವೆಯಲ್ಲಿ ಆಧುನಿಕ ಜೀವನಶೈಲಿಯೊಂದಿಗೆ ಸೌರಾಷ್ಟ್ರದ ಸಂಪ್ರದಾಯವನ್ನು ಪ್ರತಿಬಿಂಬಿಸಲು ಪ್ರಯತ್ನಿಸಿದರು. ಸೌರಾಷ್ಟ್ರದಲ್ಲಿ ಮದುವೆ ಮೆರವಣಿಗೆ ನಡೆಯುವಾಗ ವರನು ಎತ್ತಿನ ಬಂಡಿಯಲ್ಲಿ ಮಾತ್ರ ಹೋಗುತ್ತಾನೆ ಎಂದು ಬಿಜೆಪಿ ಮುಖಂಡ ಭರತ್ ವಘಾಸಿಯಾ ಹೇಳಿದ್ದಾರೆ.
50 ಲಕ್ಷದಿಂದ 5 ಕೋಟಿಯವರೆಗಿನ ಕಾರ್ಗಳು: ಇದು ನಮ್ಮ ಹಳೆಯ ಸಂಪ್ರದಾಯ, ಆದರೆ, ನನ್ನ ಇಬ್ಬರು ಮಕ್ಕಳು ಈ ದುಬಾರಿ ಕಾರ್ಗಳನ್ನು ಇಷ್ಟಪಡುತ್ತಾರೆ. ಇದಕ್ಕಾಗಿ ಸಂಪ್ರದಾಯ ಪಾಲಿಸುವ ಜೊತೆಗೆ 50 ಲಕ್ಷದಿಂದ 5 ಕೋಟಿಯವರೆಗಿನ ಕಾರ್ಗಳನ್ನು ಮೆರವಣಿಗೆಯಲ್ಲಿ ಸೇರಿಸಿ ಅವರ ಇಷ್ಟಾರ್ಥಗಳನ್ನು ಈಡೇರಿಸಿದ್ದೇನೆ. ನನ್ನ ಮಗನ ಮದುವೆಗೆ ನವಸಾರಿ, ಮುಂಬೈ ಮತ್ತು ವಲ್ಸಾದ್‌ನಿಂದ ಅವರ ಸ್ನೇಹಿತರು ಬಂದಿದ್ದರು. ಜನರು ನೆನಪಿಟ್ಟುಕೊಳ್ಳಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕನ್ನಡ ಭಾಷೆ ಸುಂದರ, ಸಾಹಿತ್ಯ ಸಮೃದ್ಧ: ಬಾರಿಸು ಕನ್ನಡ ಡಿಂಡಿಮವದಲ್ಲಿ ಮೋದಿ ಭಾಷಣ